ಉಡುಪಿಯಲ್ಲಿ ದುರಂತ ಪ್ರೇಮ ಪ್ರಕರಣವೊಂದು ನಡೆದೇ ಹೋಗಿದೆ. ಆತ ಆಕೆಗೆ ಮನಸ್ಸನ್ನು ಕೊಟ್ಟದಕ್ಕೆ ಪ್ರಾಣವನ್ನೇ ಬಿಟ್ಟಿದ್ದಾನೆ ಅಮಾಯಕ ಪ್ರೇಮಿ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರೊಂದಿಗೆ ನಡೆದ ಗಲಾಟೆ ಹಾಗೂ ಹಲ್ಲೆಯ ಆರೋಪದ ಬೆನ್ನಲ್ಲೇ, ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಪ್ರದೀಪ್ ಪೂಜಾರಿ (28) ಆಸ್ಪತ್ರೆಯ ಶೌಚಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.
ಹಿಂದೂಪರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮೃತ ಪ್ರದೀಪ್ ಪೂಜಾರಿ (28) ಅವರು ಪೆರ್ಡೂರು ಸಮೀಪದ ಪಾಡಿಗಾರ್ ಮೂಲದವರಾಗಿದ್ದು, ಕಳೆದ 7 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಕ್ಟೋಬರ್ 27ರಂದು ಯುವತಿಯ ಮನೆಗೆ ತೆರಳಿದ್ದ ಪ್ರದೀಪ್, ಅಲ್ಲಿ ಗಲಾಟೆ ನಡೆಸಿ ಯುವತಿ ಹಾಗೂ ಆಕೆಯ ತಾಯಿಯ ಮೇಲೆ ಮೆಣಸಿನ ಪುಡಿ ಎರಚಿ ದಾಳಿ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಮನೆಯವರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ನೆರೆಹೊರೆಯವರು ಪ್ರದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಪ್ರದೀಪ್, ಈ ಕುರಿತು ವಿಡಿಯೋ ಸಹಿತ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಮತ್ತೊಂದೆಡೆ, ಪ್ರದೀಪ್ ವಿರುದ್ಧ ಯುವತಿಯ ಮನೆಯವರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಯಾಗಿದ್ದರು ಎಂದು ತಿಳಿದುಬಂದಿದೆ.
ಯುವತಿ ಕುಟುಂಬದವರ ಸುಳ್ಳು ರೇಪ್ ಕೇಸ್, ಅಮಾನುಷ ಗುಂಪು ಹಲ್ಲೆ- ಆಸ್ಪತ್ರೆಯಲ್ಲಿ ಯುವಕ ಆತ್ಮಹತ್ಯೆ ಉಡುಪಿ ಪೆರ್ಡೂರಿನ ಪ್ರದೀಪ್ ಪೂಜಾರಿ ಎಂಬ ಯುವಕ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಯುವತಿಯನ್ನು ಪ್ರೀತಿಸಿದ್ದಾನೆ. ಪ್ರೀತಿಸಿದಕ್ಕೆ ಯುವಕನ ಮೇಲೆ 2014 ರ ಸೆ10 ರಂದು ಅಪಹರಿಸಿ ಅತ್ಯಾಚಾರ ಎಸಗಿರುವ ಜೊತೆಗೆ ಎಸ್ಸಿ ಎಸ್ಟಿ ಅಡಿ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ವರ್ಷಗಳ ನಂತರ ಪ್ರದೀಪ್ ಪೂಜಾರಿಯನ್ನು ದೋಷಿ ಎಂದಿತ್ತು ಉಡುಪಿ ಪ್ರಧಾನ ಜಿಲ್ಲಾ ವಿಶೇಷ ನ್ಯಾಯಾಲಯ. ಈ ತೀರ್ಪನ್ನು ಪ್ರಶ್ನಿಸಿ ಪ್ರದೀಪ್ ಪೂಜಾರಿ ಕುಟುಂಬಸ್ಥರು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಸಾಕ್ಷ್ಯಾಧಾರ ಪರಿಶೀಲಿಸಿದ ನ್ಯಾಯಾಲಯ ಶಿಕ್ಷೆ ಆದೇಶ ರದ್ದು ಮಾಡಿತ್ತು. ಇಷ್ಟಕ್ಕೆ ಸಮಾಧಾನಗೊಳ್ಳದ ಯುವತಿ ಕುಟುಂಬಸ್ಥರು ಮತ್ತೋರ್ವ ಯುವತಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ 2025 ನವೆಂಬರ್ 12 ರಂದು ಮತ್ತೊಂದು ಪ್ರಕರಣ ಪ್ರದೀಪ್ ವಿರುದ್ದ ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಮತ್ತೆ 2026 ರ ಜೂನ್ 12ರಂದು ಒಂದು ಲಕ್ಷ ವೈಯುಕ್ತಿಕ ಬಾಂಡ್ ಮತ್ತು ಇಬ್ಬರ ಶೂರಿಟಿ ಷರತ್ತಿನ ಮೇಲೆ ಜಾಮೀನು ನೀಡಿತ್ತು ನ್ಯಾಯಾಲಯ. ಮತ್ತೆ ಮತ್ತೆ ಜಾಮೀನು ಸಿಕ್ಕಿದಕ್ಕೆ ಯುವತಿ ಕುಟುಂಬಸ್ಥರು ಅಕ್ಷರಶಃ ರಾಕ್ಷಸರಂತೆ ವರ್ತಿಸಿದ್ದಾರೆ. ಜಾಮೀನು ಸಿಕ್ಕಿದ್ದೇ ತಡ ಪ್ರದೀಪ್ ಪೂಜಾರಿ ಮೇಲೆ ಯುವತಿ ಕುಟುಂಬಸ್ಥರು ಮಾರಣಾಂತಿಕವಾಗಿ ಗುಂಪು ಹಲ್ಲೆ ನಡೆಸಿದ್ದಾರೆ. ಕೂಡಲೇ ಹಿರಿಯಡ್ಕ ಪೊಲೀಸ್ ಠಾಣೆಗೆ ಹಲ್ಲೆ ನಡೆಸಿದವರ ವಿರುದ್ದ ಪ್ರಕರಣ ದಾಖಲಿಸಲು ಪ್ರದೀಪ್ ಹೋಗಿದ್ದಾರೆ. ಆದ್ರೆ ಠಾಣಾಧಿಕಾರಿ ಅತ್ಯಾಚಾರ ಆರೋಪಿ ಎಂದು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಕೂಡಲೇ ಉಡುಪಿಯ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರದೀಪ್ ಅವರ ಮೇಲೆ ನಿಗಾ ವಹಿಸಲು ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ. ಆದರೂ ಆಸ್ಪತ್ರೆಯ ಶೌಚಾಲಯದಲ್ಲಿ ಅವರು ನೇಣು ಹಾಕಿ ಕೊಂಡಿದ್ದು ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾವಿಗೆ ಮುನ್ನ ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿದ ದೂರು ದಾಖಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಪ್ರದೀಪ್ ಹಲವು ಬಾರಿ ಹಿರಿಯಡಕ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು ಎನ್ನಲಾಗಿದೆ.
ಪ್ರದೀಪ್ ಸಾವಿಗೆ ಮಾಡಿಕೊಳ್ಳಲು ನಿಖರವಾಗಿ ಕಾರಣವೇನು, ಹಲ್ಲೆಯ ದೂರಿನ ವಿಚಾರದಲ್ಲಿ ಪೊಲೀಸ್ ಠಾಣೆಯಲ್ಲಿ ಏನು ನಡೆದಿದೆ ಹಾಗೂ ಆಸ್ಪತ್ರೆಯಲ್ಲಿ ನಿಗಾ ಇದ್ದರೂ ಈ ಘಟನೆ ಹೇಗೆ ಸಂಭವಿಸಿತು ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಘಟನೆಯ ಎಲ್ಲ ಆಯಾಮಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ಯುವತಿ ಮನೆಯವರೇ ನೇರ ಹೊಣೆ ಎಂದು ಮೃತ ಪ್ರದೀಪ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರೀತಿಸಿದ ತಪ್ಪಿಗೆ ಅಮಾಯಕ ಯುವಕ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹಲ್ಲೆ ನಡೆದಾಗಲೇ ಪೊಲೀಸರು ನೆರವಾಗಿದ್ದರೆ ಆತ ಬದುಕುಳಿಯುತ್ತಿದ್ದ. ರಾಕ್ಷಕರ ಜೊತೆ ರಕ್ಷಕರು ನಿಂತರಾ ಎಂಬ ಅನುಮಾನ ಶುರುವಾಗಿದೆ.




















