ಪುತ್ತೂರು: ಹಿಂದೂ ಸಮಾಜವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಒಗ್ಗೂಡಿಸಿ, ಸಮಾಜದಲ್ಲಿ ಸಾಮರಸ್ಯ, ಸಂಘಟನೆ ಮತ್ತು ಧಾರ್ಮಿಕ ಜಾಗೃತಿಯ ಸಂದೇಶ ಸಾರುವ ಉದ್ದೇಶದಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಗಿರಿಜಾ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಡಿ.12 ಮತ್ತು 13ರಂದು ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ, ಲಕ್ಷ ಬಿಲ್ವಾರ್ಚನೆ, ಶಿವಾರತಿ ಸಮರ್ಪಣೆ ಹಾಗೂ ಕೇಸರಿ ಸಂಗಮ ಸೇರಿದಂತೆ ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಗಿರಿಜಾ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.
ಪುತ್ತೂರು ಸುಭದ್ರ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಹಿಂದೂ ಸಮಾಜದ ಎಲ್ಲ ಬಂಧುಗಳು ಪಕ್ಷ, ಜಾತಿ ಭೇದ ಮರೆತು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮತ್ತು ಹೊಸ ಚೈತನ್ಯ ಮೂಡಬೇಕು ಎಂಬ ಆಶಯದೊಂದಿಗೆ ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಗಿರಿಜಾ ಕಲ್ಯಾಣೋತ್ಸವವೂ ಅದೇ ಆಶಯದ ಮಹತ್ವದ ಹೆಜ್ಜೆಯಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಮೋನಪ್ಪ ಪುರುಷ ಮುಗೇರಡ್ಕ, ಅಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅರ್ಧಯಕ್ಷ ಶ್ರೀರಾಮ್ ಭಟ್ ಪಾತಾಳ, ಸೀತಾ ಪರಿವಾರ ಅಧ್ಯಕ್ಷೆ ಪ್ರೇಮ ಉಪಸ್ಥಿತರಿದ್ದರು. ಆಮಂತ್ರಣ ಸಮಿತಿ ಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿದರು.






















