ಉಪ್ಪಿನಂಗಡಿ: ರೀಲ್ಸ್, ಬ್ಯಾನರ್ಗಳೇ ಪುತ್ತೂರು ಶಾಸಕರ ಅಭಿವೃದ್ಧಿಯಾಗಿದ್ದು, ಬಿಜೆಪಿ ಶಾಸಕರಿರುವಾಗ ತಂದ ಅನುದಾನ ಹಾಗೂ ಮೂರುವರೆ ವರ್ಷದಲ್ಲಿ ನೀವು ತಂದ ಅನುದಾನವನ್ನು ತಾಕತ್ತಿದ್ದರೆ ಪೆರ್ನೆಗೆ ತೆಗೊಂಡು ಬನ್ನಿ. ನಾವು ನಿಮಗೆ ಇಲ್ಲಿ ಉತ್ತರ ಕೊಡುತ್ತೇವೆ ಎಂದು ಹಿಂದೂಪರ ಸಂಘಟನೆಗಳ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಸವಾಲೆಸೆದರು.
ಪೆರ್ನೆ- ಬಿಳಿಯೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪೆರ್ನೆಯಲ್ಲಿ ನಡೆದ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಎಂಬ ಹಕ್ಕೋತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ. ಕೋವಿಡ್ನಂತಹ ಸಂದಿಗ್ಥ ಕಾಲಘಟ್ಟದಲ್ಲಿ ಅವರು ಶಾಸಕರಾಗಿದ್ದರೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ಕೆ ಪೆರ್ನೆಯಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿದ ಒಂದು ಕಿಂಡಿ ಅಣೆಕಟ್ಟು ಸಾಕು. ಇದರಿಂದ ಅದೆಷ್ಟೋ ರೈತರಿಗೆ ಉಪಕಾರವಾಗಿದೆ ಎಂದ ಅವರು, ಕೋಡಿಂಬಾಡಿಯಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಸಂದರ್ಭ ಅಲ್ಲಿನ ವ್ಯಕ್ತಿಯೋರ್ವರು ಕೋರ್ಟಿಗೆ ಹೋಗಿ ಸ್ಟೇ ತಂದಿದ್ದರು. ಬಳಿಕ ಅವರ ಮನೆ ಮುಂದೆ ತಡೆಗೋಡೆ ಕಟ್ಟಲು ಅಂದಿನ ಶಾಸಕ ಸಂಜೀವ ಮಠಂದೂರು 48 ಲಕ್ಷ ಅನುದಾನ ನೀಡಿದರು. ಇದು ಯಾರ ಮನೆ ಎಂದು ನಿಮಗೆಲ್ಲಾ ಗೊತ್ತಿರಬಹುದೆಂದು ವ್ಯಂಗ್ಯವಾಡಿ, ಕಾಂಗ್ರೆಸ್ ಸರಕಾರ ಬಡವರ ರಕ್ತ ಹೀರುತ್ತಿದ್ದು, ಕಾಂಗ್ರೆಸ್ಗೆ ಅಂತಿಮ ಮೊಳೆ ಹೊಡೆಯುವ ಸಮಯ ಸನ್ನಿಹಿತವಾಗಿದೆ. ಆದ್ದರಿಂದ ಕಾರ್ಯಕರ್ತರೆಲ್ಲಾ ಮುಂದಿನ ಬಾರಿ ಬಿಜೆಪಿಯನ್ನು ಗೆಲ್ಲಿಸಲು ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ಮನೆಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನರೇಂದ್ರ ಮೋದಿಯವರ ಆಡಳಿತದ ಕಾಲಘಟ್ಟದಲ್ಲಿ ಪೆರ್ನೆಯು ಯಾವ ರೀತಿ ಬದಲಾಗಿದೆ ಎಂಬುದಕ್ಕೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು ನೋಡಿದರೆ ಗೊತ್ತಾಗುತ್ತದೆ. ಉತ್ತಮ ರಸ್ತೆ ನೀಡುವ ಕೆಲಸ ಮೋದಿ ನೇತೃತ್ವದ ಕೇಂದ್ರ ಸರಕಾರದ್ದು ಆದರೆ, ಗುಂಡಿ ಬಿದ್ದ ರಸ್ತೆಗಳನ್ನು ನೀಡುವ ಕೆಲಸವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮಾಡುತ್ತಿದೆ. ಈ ಸರಕಾರ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನದಲ್ಲಿದ್ದರೆ, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಕಾಂಗ್ರೆಸ್ ಸರಕಾರಕ್ಕೆ ಬಡವರ, ರೈತರ, ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ಪಂಚಗ್ಯಾರಂಟಿ ಯೋಜನೆಯೆಂದರೆ ಕಾಂಗ್ರೆಸ್ ಕಾರ್ಯಕರ್ತರ ಉದ್ಧಾರಕ್ಕಾಗಿ ಮಾಡಿದ್ದೇ ಹೊರತು ಅದು ಬಡ ಜನತೆಯ ಮೇಲಿನ ಕಾಳಜಿಯಿಂದಲ್ಲ. ಪುತ್ತೂರಿನ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಿ ಪೆರ್ನೆಯ ಕಾಂಗ್ರೆಸ್ ಮುಖಂಡರೋರ್ವರು ಉತ್ತಮ ಸಂಬಳ, ಪುನರ್ವಸತಿ ಕೇಂದ್ರದ ಸೌಲಭ್ಯ ಪಡೆಯುತ್ತಿದ್ದಾರೆ. ಅರ್ಹರಿಗೆ ಸಿಗಬೇಕಾದ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಈ ಸರಕಾರ ಬಂದ ಬಳಿಕ ಸಿಗುತ್ತಾ ಇಲ್ಲ. ಇಲ್ಲಿಯ ಶಾಸಕರು ಇದ್ದಾರೋ ಇಲ್ವೋ ಗೊತ್ತಿಲ್ಲ. ತಾ.ಪಂ. ಪಂಚಾಯತ್ ಅನುದಾನದಿಂದ ಹೈಮಾಸ್ಟ್ ದೀಪ ಅಳವಡಿಸಿ ಅದಕ್ಕೆ ಶಾಸಕರ ಪೋಟೋ ಹಾಕುತ್ತಿದ್ದಾರೆ. ರಾಜ್ಯ ಸರಕಾರವು ದಿವಾಳಿಯಾಗಿದ್ದು, ಎಂಟೂವರೆ ಕೋಟಿ ರೂ. ಸಾಲ ಮಾಡಿದೆ ಎಂದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ರಾಜ್ಯ ಸರಕಾರದ ವೈಫಲ್ಯಗಳನ್ನು ಟೀಕಿಸಿದರು.
ವೇದಿಕೆಯಲ್ಲಿ ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಎಸ್ಟಿ ಮೋರ್ಚಾದ ಜಿಲ್ಲಾ ಉಪಾಯಕ್ಷ ಶಿವಪ್ಪ ನಾಯ್ಕ, ಮುಖಂಡರಾದ ಪುರುಷೋತ್ತಮ ಮುಂಗ್ಲಿಮನೆ, ಶಿವಕಿರಣ್ ಭಟ್, ಮಣಿಕಂಠ, ಶಾಂತಾರಾಮ ನಾಯಕ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಗೋಪಾಲ ಸಪಲ್ಯ, ಮುತ್ತಪ್ಪ ಸಾಲ್ಯಾನ್, ಕಿರಣ್ ಶೆಟ್ಟಿ ಪೆರ್ನೆ, ಪ್ರಕಾಶ್ ನಾಯಕ್ ಮೈರ, ಸಂಜೀವ ಬಂಡಾರಿ, ಹರಿಣಾಕ್ಷಿ, ಯಶೋಧಾ, ಸುಮತಿ, ಜಯಕೀರ್ತಿ ಅರಿಗ, ನಾರಾಯಣ ನಾಯ್ಕ, ಸುರೇಶ್ ಕೋಡಿ, ಉಮೇಶ್ ಸಾಲ್ಯಾನ್, ರಾಜೇಶ್ ಸಪಲ್ಯ, ಮುಕುಂದ ಬಜತ್ತೂರು, ಮಹೇಶ್, ಸುರೇಂದ್ರ ನಾಯಕ್, ಉಮೇಶ ನಾಯಕ್, ಜಾರಪ್ಪ ಗೌಡ, ಸುರೇಶ್ ನೂಜಿ, ಗೋಪಾಲ ಸಪಲ್ಯ ಬೆದ್ರ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು. ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಪದೆಬರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರ್ನೆ ಬಿಳಿಯೂರು ಶಕ್ತಿ ಕೇಂದ್ರದ ಪ್ರಮುಖ್ ರಮೇಶ್ ವಂದಿಸಿದರು.






















