ಮಂಗಳೂರು : 10 ನೇ ವರ್ಷದ ರಾಮ – ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳದ ಮಹಾಸಭೆಯು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಪತ್ತುಮುಡಿ ಜನತಾ ಡಿಲೆಕ್ಸ್ ಸಭಾಂಗಣದಲ್ಲಿ ನಡೆಯಿತು.
ವೈಭವದಿಂದ ನಡೆಯುವ ಈ ಕಂಬಳ ಜನವರಿ 02 ರಂದು ನಡೆಯಲಿದೆ. ದಶ ಸಂಭ್ರಮದಲ್ಲಿ ಈ ಬಾರಿಯ ಕಂಬಳ ನಡೆಯಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಜನಮನ ಕಂಬಳ ಎಂದೇ ತುಳುನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ.
ಮಂಗಳೂರಿನಂತಹ ಮಹಾನಗರಿಯಲ್ಲಿ ಕಂಬಳ ಆಯೋಜಿಸುವುದು ಸವಾಲಿನ ಕೆಲಸ. ಇದನ್ನು ಸಾಧ್ಯವಾಗಿಸಿದವರು ಜಿಲ್ಲೆಯ ಹೆಮ್ಮೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ. ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಜಾಗವನ್ನು ಕೊಟ್ಟವರು ಡಾ. ಪ್ರಕಾಶ್ ಶೆಟ್ಟಿ. ಕಳೆದ 10 ವರ್ಷಗಳಲ್ಲಿ ಡಿಸೆಂಬರ್ ಕೊನೆಯ ವಾರ ಅಥವಾ ಹೊಸ ವರುಷದ ಪ್ರಥಮ ವಾರದಲ್ಲೇ ಈ ಕಂಬಳ ಆಯೋಜನೆಗೊಳ್ಳುವುದು ವಿಶೇಷ. ಕ್ಯಾ. ಬಿಜೇಶ್ ಚೌಟ ಅವರು ಜನಪ್ರತಿನಿಧಿಯಾಗುವ ಮೊದಲೇ ಈ ಕಂಬಳವನ್ನು ಪ್ರಾರಂಭಿಸಿದ್ದು ಗಮನಿಸಬೇಕಾದ ಅಂಶ. ಈ ಕಂಬಳಕ್ಕೆ ಕೇವಲ ತುಳುನಾಡಿನ ಜನತೆ ಮಾತ್ರವಲ್ಲದೆ ಅಂತಾರಾಷ್ರ್ಟೀಯ ಮಟ್ಟದಿಂದ ಅಭಿಮಾನಿಗಳು, ಛಾಯಾಚಿತ್ರಗ್ರಾಹಕರು, ವಿದೇಶಿಗರು ಸೇರಿದಂತೆ ಅನೇಕರು ಆಗಮಿಸುತ್ತಾರೆ.
ಮುಖ್ಯವಾಗಿ, ಸಂಸದರೊಬ್ಬರ ಅಧ್ಯಕ್ಷತೆಯಲ್ಲಿ ನಡೆಯುವ ತುಳುನಾಡಿನ ಏಕೈಕ ಕಂಬಳ ಇದಾಗಿದೆ. ಇನ್ನು ಬಹುತೇಕ ಎಲ್ಲಾ ಕಂಬಳಗಳಲ್ಲಿ ವಯಸ್ಸಾದವರೇ ಹೆಚ್ಚಾಗಿ ಕಾಣಸಿಗುತ್ತಾರೆ. ಆದರೆ ಕ್ಯಾ. ಚೌಟ ಅವರು ಯುವಕರನ್ನೇ ಹೆಚ್ಚಾಗಿ ಸೇರಿಸಿಕೊಂಡು ಈ ಕಂಬಳವನ್ನು ಆಯೋಜಿಸಿದ್ದು, ನಮ್ಮ ನಾಡಿನ ಸಂಸ್ಕೃತಿಯ ಮಹತ್ವವನ್ನು ಯುವಜನಾಂಗಕ್ಕೆ ಸಾರುವ ಕೆಲಸವನ್ನು ಮತ್ತು ಪ್ರಸ್ತುತ ದಿನಗಳಲ್ಲಿ ದಾರಿ ತಪ್ಪುತ್ತಿರುವ ಜೆನ್ಝೀಗಳನ್ನು ಸಂಸ್ಕಾರ, ಸಂಸ್ಕೃತಿ, ಆಚರಣೆ ಉಳಿಸಿಕೊಳ್ಳುವ ಕೆಲಸವನ್ನು ಸಂಸದರು ಮಾಡಿತ್ತಾ ಬಂದಿದ್ದಾರೆ. ಇನ್ನು ಈ ವರ್ಷದಲ್ಲಿ ಕಂಬಳದ ಜೊತೆಗೆ ಬೇರೆ ಯೋಜನೆಗಳೂ ಇದ್ದು, ಅವೆಲ್ಲವೂ ಸಮಾಜಕ್ಕೆ ಪೂರಕವಾಗಲಿದೆ ಎಂದು ಕಂಬಳದ ಪ್ರಮುಖರು ತಿಳಿಸಿದ್ದಾರೆ. ಬ್ಯಾಕ್ ಟು ಊರು ಎಂಬ ಪರಿಕಲ್ಪನೆಯಲ್ಲಿ ಕಳೆದ ಕಂಬಳದ ಸಂದರ್ಭದಲ್ಲಿ 10 ಉದ್ಯಮಿಗಳನ್ನು ಸನ್ಮಾನಿಸಿರುವುದು ಹೆಮ್ಮೆಯ ಸಂಗತಿ.
ಸಭೆಯಲ್ಲಿ ರಾಜ್ಯ ಕಂಬಳ ಸಮಿತಿಯ ಮುಚ್ಚೂರು ಕಲ್ಕುಡ ಲೋಕೇಶ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರ ಪಿ.ಆರ್. ಶೆಟ್ಟಿ, ಪ್ರಸಾದ್ ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ಉಪಾಧ್ಯಕ್ಷ ಅನಿಲ್ ಕುಮಾರ್, ಕಿರಣ್ ಕೋಡಿಕಲ್, ಮನೋಹರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ಉಪಸ್ಥಿತರಿದ್ದರು.
ಸಮಿತಿಯ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಕಾಶ್ ಗರೋಡಿ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಕಂಬಳ ಸಮಿತಿ ಕಾರ್ಯದರ್ಶಿ ಮನ್ಮಥ ಶೆಟ್ಟಿ ನಿರ್ವಹಿಸಿದರು.
























