ಪುತ್ತೂರು : ಕಳೆದ ಕೆಲ ದಿನಗಳ ಹಿಂದೆ ಪುತ್ತೂರು ಕ್ಷೇತ್ರದ ವಿಟ್ಲದಲ್ಲಿ ಭಾಷಣ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬರೀ ಸುಳ್ಳುಗಳನ್ನು ಹೇಳಿ ಸತ್ಯವನ್ನು ಕೊಲ್ಲುವ ಪ್ರಯತ್ನ ಮಾಡಿದ್ದು, ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿರುವುದು, ಫಲಾನುಭವಿಗಳಿಗೆ ಎಲ್ಲಾ ರೀತಿಯ ಮಾಸಾಶನಗಳು ಸಮರ್ಪಕವಾಗಿ ಜಮೆಯಾಗಿರುವುದಕ್ಕೆ ದಾಖಲೆಗಳು ನಮ್ಮ ಬಳಿ ಇವೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಅವರು ಮಂಗಳವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬೆಳ್ತಂಗಡಿ ಶಾಸಕರು ನಿರಂತರವಾಗಿ ಪುತ್ತೂರು ಶಾಸಕರ ಮೇಲೆ ಸುಳ್ಳು ಹೇಳಿಕೆಗಳ ಮೂಲಕ ದಾಳಿ ಮಾಡುವ ಯತ್ನ ನಡೆಸುತ್ತಿದ್ದು, ಅದು ಸಂಪೂರ್ಣ ವಿಫಲವಾಗಿದೆ. ಅವರು 2 ಅವಧಿಗೆ ಶಾಸಕರಾಗಿದ್ದು, ಪುತ್ತೂರಿನ ಶಾಸಕರ 1 ಅವಧಿಯ 3 ವರ್ಷವಷ್ಟೇ ಪೂರ್ಣಗೊಂಡಿದೆ. ಹೀಗಿರುವಾಗ ಅವರು 2 ಕ್ಷೇತ್ರಗಳ ಅಭಿವೃದ್ಧಿಯನ್ನು ತುಲನೆ ಮಾಡುವುದೇ ಅವೈಜ್ಞಾನಿಕವಾಗಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಬಂದ ಬಳಿಕ ರಾಜ್ಯ ಜನತೆಯ ತಲಾ ಆದಾಯ ವೃದ್ಧಿಯಾಗಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಯು 2023ರ ಆಗಸ್ಟ್ ನಲ್ಲಿ ಆರಂಭಗೊಂಡಿದ್ದು, ಈವರೆಗೆ 36 ತಿಂಗಳ ಹಣ ಜಮೆಯಾಗಿದೆ. ಅದರ ಕುರಿತು ಫಲಾನುಭವಿಗಳ ಬ್ಯಾಂಕ್ ಖಾತೆಯ ಪುಸ್ತಕಗಳ ದಾಖಲೆ ನಮ್ಮ ಬಳಿ ಇವೆ. ಜತೆಗೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಮೊದಲಾದ ಮಾಸಾಶನಗಳು ಬಂದಿಲ್ಲ ಎಂದು ಹರೀಶ್ ಪೂಂಜ ಆರೋಪಿಸಿದ್ದು, ಎಲ್ಲರಿಗೂ ಹಣ ಜಮೆಯಾಗಿರುವುದಕ್ಕೆ ತಹಶೀಲ್ದಾರ್ ಅವರು ದಾಖಲೆಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ವಸತಿ ಯೋಜನೆಯಲ್ಲಿ ಮನೆ ನೀಡಿಲ್ಲ ಎಂಬ ಆರೋಪ ಮಾಡಿದ್ದು, ಪುತ್ತೂರು ಕ್ಷೇತ್ರಕ್ಕೆ ಮೊದಲ ವರ್ಷ 250 ಮನೆಗಳು ಮಂಜೂರಾಗಿವೆ. ಮುಂದೆ 3 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಲಿದ್ದು, ಅದರ ಸಿದ್ಧತೆಗಳು ನಡೆಯುತ್ತಿದೆ. ಬೆಲೆ ಏರಿಕೆಗಳಿಗೆ ಕೇಂದ್ರ ಸರಕಾರವೇ ಕಾರಣವಾಗಿದ್ದು, ಅದರಿಂದ ರಾಜ್ಯದಲ್ಲೂ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಗಳನ್ನು ಕೇಂದ್ರ ಸರಕಾರವೇ ಏರಿಕೆ ಮಾಡಿದೆ. ರಾಜ್ಯದಲ್ಲಿ ಕೇಂದ್ರದ 15ನೇ ಹಣಕಾಸು ಯೋಜನೆಯ ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪ ಮಾಡಿದ್ದು, ಕೇಂದ್ರವು ರಾಜ್ಯಕ್ಕೆ 15ನೇ ಹಣಕಾಸು ಯೋಜನೆಯ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ರವೀಂದ್ರ ರೈ ನೆಕ್ಕೀಲು, ಅಬ್ದುಲ್ ರಹಿಮಾನ್ ಅಝಾದ್, ರಾಮ ಮೇನಾಲ, ಚಂದ್ರಪ್ರಭಾ ಗೌಡ, ಜಾನ್ ಸಿರಿಲ್ ರೊಡ್ರಿಗಸ್ ಉಪಸ್ಥಿತರಿದ್ದರು.
























