ಪುತ್ತೂರು: ರಾಜಕಾರಣಿ ಕೇವಲ ರಸ್ತೆ ಮತ್ತು ಅಭಿವೃದ್ದಿಗೆ ಸೀಮಿತವಾಗಬಾರದು. ಅವೆಲ್ಲ ಯಾರು ಬರಲಿ ಬಾರದೆ ಇರಲಿ ತನ್ನಿಂದ ತಾನೆ ಆಗುತ್ತಾ ಇರುತ್ತದೆ. ಆದರೆ ನಮ್ಮ ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಅವರ ಭವಿಷ್ಯಕ್ಕೆ ನಾವು ದಾರಿಯಾಗಬೇಕು. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುತ್ತಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲೂಕಿನ 6 ಮಂದಿ ವಿದ್ಯಾರ್ಥಿಗಳನ್ನು ಮೇ.16ರಂದು ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಅವರು ಸನ್ಮಾನಿಸಿ ಗೌರವಿಸಿದರು. ರಾಜಕಾರಣಿ ಕೇವಲ ರಸ್ತೆ ಮಾತ್ರ ಮಾಡುವುದಲ್ಲ. ಇತರ ಸಾಮಾಜಿಕ ಕ್ಷೇತ್ರದಲ್ಲೂ ಕೆಲಸ ಮಾಡಬೇಕು. ಇಂತಹ ಸಂದರ್ಭ ನಮ್ಮ ಪುತ್ತೂರಿನ ಕೀರ್ತಿಗೆ ಭಾಜನರಾದ ವಿದ್ಯಾರ್ಥಿಗಳನ್ನು ಗೌರವಿಸುವುದು ಅವರಿಗೆ ಅವರ ಮುಂದಿನ ಶೈಕ್ಷಣಿಕ ಜೀವನದಲ್ಲಿ ಉತ್ತೇಜನ ನೀಡುವುದು ನನ್ನ ಕರ್ತವ್ಯ. ವಿದ್ಯಾರ್ಥಿಗಳು ನನ್ನನ್ನು ಯಾವತ್ತು ಬೇಕಾದರೂ ಭೇಟಿ ಮಾಡಬಹುದು. ಪ್ರತಿ ಸೋಮವಾರ ನಾನು ಕಚೇರಿಯಲ್ಲಿರುತ್ತೇನೆ. ನನ್ನಿಂದ ವೈಯುಕ್ತಿಕ ಸಹಾಯ ಮಾಡಬಲ್ಲೆ. ಅದರಲ್ಲೂ ಬೇಸಿಕ್ ಸಮಸ್ಯೆ ಇದ್ದವರಿಗೆ ಕಂಡಿತಾ ಸಹಾಯ ಮಾಡುತ್ತೇನೆ. ಇವತ್ತು ವಿದ್ಯಾರ್ಥಿಗಳ ಅಂಕ ಗಳಿಸುವಿಕೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರವೂ ಇದೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ವಿಧಾನಸಭಾ ಕ್ಷೇತ್ರದಲ್ಲೂ ಉತ್ತಮ ಅಂಕ ಪಡೆದವರಿದ್ದಾರೆ ಎಂಬುದು ನನಗೂ ಹೆಮ್ಮೆಯಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಶಾಸಕರ ಪಾಠ:
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಅಂಕ ಗಳಿಸಿದಂತೆ ಮುಂದೆ ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸಬೇಕು. ಈ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ದರಾಗಬೇಕು. ಬರೇ ಇಂಜಿನಿಯರಿಂಗ್ ಮತ್ತು ಡಾಕ್ಟರ್ ಗೆ ಮಾತ್ರ ಹೋಗುವುದಾದರೆ ನೀಟ್‌ನಲ್ಲಿ ತುಳುಕೂಟವಿದೆ. ಈಗಲೇ ತುಳುಕೂಟದ ದಾಖಲೆ ಸರಿಮಾಡಿಸಿ ಇಟ್ಟುಕೊಳ್ಳಿ. ತುಳು ಕೂಟದಲ್ಲಿ 150 ಅಂಕ ಗಳಿಸಿದರೂ ಮೆಡಿಕಲ್ ಸೀಟ್ ಸಿಗುತ್ತದೆ. ಮೆಡಿಕಲ್ ಸೀಟ್‌ಗೆ ಯಾವತ್ತು ಡಿಮಾಂಡ್ ತಪ್ಪುವುದಿಲ್ಲ. ಇದರ ಜೊತೆಗೆ ಐಎಎಸ್, ಐಪಿಎಸ್‌ಗೂ ಬೇಡಿಕೆ ಇದೆ. ಈ ಆಲೋಚನೆಯಲ್ಲಿದ್ದರೆ ನೀವು ಪಿಯುಸಿ ಹಂತದಲ್ಲೇ ತರಬೇತಿ ಪಡೆದುಕೊಳ್ಳಿ. ಐಎಎಸ್ ತರಬೇತಿಗೆ ಹೋದವರು ಕೆಎಎಸ್ ಬರೆಯಬಹುದು.
ವಿದ್ಯಾರ್ಥಿಗಳು ಮುಂದೆ ಉತ್ತಮ ಅಂಕ ಗಳಿಸಿ. ಅಂಕಕ್ಕಾಗಿ ನಿದ್ದೆಕೆಟ್ಟು ಓದಬೇಡಿ. ಆರೋಗ್ಯ ಕಾಪಾಡಿಕೊಳ್ಳಿ. ಪುತ್ತೂರಿಗೆ ಕೀರ್ತಿ ತರುವ ಕೆಲಸ ಮಾಡಿ ಎಂದರು. ಈ ಸಂದರ್ಭ ಕೆಯ್ಯರು ಕೆಪಿಎಸ್ ಸ್ಕೂಲ್‌ನ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ, ಉಮಾನಾಥ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಿತೇಶ್ ಶೆಟ್ಟಿ, ರಜಾಕ್ ಬಪ್ಪಳಿಗೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಖಿಲ್, ಶಿಕ್ಷಕಿ ಸೌಮ್ಯ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ನಿಹಾಲ್ ಶೆಟ್ಟಿ ಸ್ವಾಗತಿಸಿ, ಯೋಗೀಶ್ ಸಾಮಾನಿ ವಂದಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 321 ಅಂಕ ಗಳಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಯಾ, 620 ಅಂಕ ಗಳಿಸಿದ ಬಾಲಾಜಿ, 619 ಅಂಕ ಗಳಿಸಿದ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ ಅಕ್ಷತಾ ಗಂಗಾ, 615 ಅಂಕ ಗಳಿಸಿದ ಸರಕಾರಿ ಕೆಪಿಎಸ್ ಕೆಯ್ಯರು ಶಾಲೆಯ ಸೌಜನ್ಯ ರೈ, 611 ಅಂಕ ಗಳಿಸಿದ ಡಾ.ಬಿ.ಆರ್ ಅಂಬೇಡ್ಕರ್ ವಸತಿಯುತ ಶಾಲೆಯ ಬೀರಪ್ಪ, 612 ಅಂಕ ಗಳಿಸಿದ ಸೈಂಟ್ ವಿಕ್ಟರ್ ಶಾಲೆಯ ಅಪೂರ್ವ ಅವರನ್ನು ಶಾಸಕರು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು. ಇದೇ ಸಂದರ್ಭ ಶಿಕ್ಷಕರನ್ನೂ ಶಾಸಕರು ಗೌರವಿಸಿದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.