ಪ್ರಸ್ತುತ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ಇದು ಮುಗಿಯುತ್ತಿದ್ದಂತೆ ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಮತ್ತಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸರ್ಕಾರಿ ಶಾಲಾ ಕಾಲೇಜುಗಳನ್ನು ಸಶಕ್ತಗೊಳಿಸುವಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಆದರೆ ಯಾವ ಹಂತದ ಶಿಕ್ಷಕರನ್ನು ಎಷ್ಟೆಷ್ಟು ಭರ್ತಿ ಮಾಡಲಾಗುತ್ತದೆ ಎಂದು ಸ್ಪಷ್ಟವಾದ ಮಾಹಿತಿ ನೀಡಿಲ್ಲ.
ಮಾಧ್ಯಮ ಮಿತ್ರರೊಂದಿಗೆ ಮಾತನಾಡಿರುವ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಸೂಚಿಸಿ, ನೇಮಕಾತಿ ಪ್ರಕ್ರಿಯೆ ನಡೆಸಿದ್ದ 13 ಸಾವಿರ ಶಿಕ್ಷಕರು ಹುದ್ದೆಗಳಿಗೆ ನೇಮಕ ಆದೇಶ ನೀಡಲಾಗಿದೆ, ಅವರಲ್ಲಿ ಈಗಾಗಲೇ 12 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಪಿಯು ಕಾಲೇಜುಗಳ 900 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ನೀತಿ ಸಂಹಿತೆ ಕೊನೆಗೊಂಡ ಬಳಿಕ ಪ್ರಕ್ರಿಯೆ ಆರಂಭಿಸಲಾಗುವುದು. ಮುಖ್ಯ ಮಂತ್ರಿಗಳು ಈ ಬಗ್ಗೆ ಆಸಕ್ತಿವಹಿಸಿದ್ದು, ಸರ್ಕಾರಿ ಶಾಲೆಗಳಿಗೆ ಸಿಬ್ಬಂದಿ ಮತ್ತು ಮೂಲ ಸೌಕರ್ಯ ನೀಡಲಾಗುವುದು ಎಂದಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರು – 46,000 ಕ್ಕೂ ಹೆಚ್ಚು ಎನ್ನಲಾಗಿದೆ.
ಪ್ರೌಢ ಶಾಲಾ ಶಿಕ್ಷಕರು – 10,000 ಕ್ಕೂ ಹೆಚ್ಚು.
ಪದವಿ ಪೂರ್ವ ಉಪನ್ಯಾಸಕರು – 3,941
ಕಳೆದ ಬಾರಿಯೂ ಇಂತಹ ದೊಡ್ಡ ಮಟ್ಟದಲ್ಲೇ ಶಿಕ್ಷಕರ ಕೊರತೆ ಎದುರಾಗಿತ್ತು. ಶಾಲೆಗಳ ಆರಂಭಕ್ಕೆ ಮುನ್ನವೇ 20 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಬಾರಿ ಶಾಲೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಅತಿಥಿ ಶಿಕ್ಷಕರ ಭರ್ತಿ ಕಾರ್ಯವೂ ನಡೆದಿಲ್ಲ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 100 ವಿದ್ಯಾರ್ಥಿಗಳಿಗೆ ಕೇವಲ ಒಬ್ಬರೇ ಶಿಕ್ಷಕರು ಬೋಧನೆ ಮಾಡುವ ಪರಿಸ್ಥಿತಿ ಎದುರಾಗಿದೆ. ವರ್ಷದಿಂದ ವರ್ಷಕ್ಕೆ ನಿವೃತ್ತಿ ಹಾಗೂ ಇನ್ನಿತರ ಕಾರಣಗಳಿಂದ ಶಿಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದ್ದು, ಖಾಲಿಯಾದ ಹುದ್ದೆಗಳನ್ನು ಸರ್ಕಾರ ತುಂಬಲು ಮುಂದಾಗುತ್ತಿಲ್ಲ.
ಶಾಲೆ ಆರಂಭಕ್ಕೆ ಮುನ್ನ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದರು. ಆದರೆ ಈ ವರೆಗೆ ಈ ಕೆಲಸವಾಗಿಲ್ಲ. ಅನುದಾನಿತ ಶಾಲೆಗಳ 6 ಸಾವಿರ ಶಿಕ್ಷಕರ ನೇಮಕಕ್ಕೆ ಸೂಚನೆ ನೀಡಲಾಗಿದೆ, ಹಾಗೂ ಸರ್ಕಾರಿ ಪಿಯು ಕಾಲೇಜುಗಳ 900 ಉಪನ್ಯಾಸಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.