ದೇವರನಾಡು ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟ ಮಲಯಾಳಂ ನಟ ಸುರೇಶ್ ಗೋಪಿ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಆದಿತ್ಯವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆದರೆ ಯಾರಿಗೆ ಯಾವ ಖಾತೆ ಎಂಬುದಾಗಿ ಖಾತೆ ಹಂಚಿಕೆಯಾಗುವುದಕ್ಕೂ ಮುನ್ನವೇ ಮೋದಿ ಹಾಗೂ ಅಮೀತ್ ಶಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಸಚಿವ ಸ್ಥಾನ ತ್ಯಜಿಸಲು ತೀರ್ಮಾನಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸ್ಥಾನ ಬಿಡಲು ಕಾರಣವೇನು..?
ನನಗೆ ಸಚಿವನಾಗುವುದಕ್ಕೆ ಇಷ್ಟವಿಲ್ಲ. ನಾನು ಸಂಸದನಾಗಿಯೇ ಇರಲು ಬಯಸುತ್ತೇನೆ. ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದು ತ್ರಿಶೂರ್ ನ ಜನರಿಗೆ ತಿಳಿದಿದೆ ಅದೇ ಕಾರಣಕ್ಕೆ ಗೆಲ್ಲಿಸಿದ್ದಾರೆ ಕೇರಳದಲ್ಲಿ ಮೊದಲ ಸಲ ಬಿಜೆಪಿ ಗೆದ್ದಿದೆ ಮುಂದೆ ಇನ್ನೂ ಹೆಚ್ಚು ಸ್ಥಾನಗಳು ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಮುಖ್ಯವಾಗಿ ಚಿತ್ರರಂಗದಲ್ಲಿದ್ದುಕೊಂಡೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಅದಲ್ಲದೇ ನಾನು ಚಿತ್ರರಂಗದಲ್ಲಿ ಮುಂದುವರಿಯಲು ಇಚ್ಚಿಸುತ್ತೇನೆ. ಈ ಮೊದಲೇ ಒಪ್ಪಿಕೊಂಡ ಸಿನೆಮಾಗಳಿವೆ ಅದಲ್ಲದೇ ಕನಿಷ್ಠ ದೊಡ್ಡ ಬಜೆಟ್ ನ ನಾಲ್ಕು ಸಿನಿಮಾ ಚಿತ್ರೀಕರಣ ಬಾಕಿಯಾಗಿದೆ ಅದನ್ನು ಮುಗಿಸುವುದು ನನ್ನ ಜವಾಬ್ದಾರಿಯಾಗಿದೆ. ಹಾಗಾಗಿ ಸಂಪುಟದಿಂದ ನನ್ನನ್ನು ಕೈಬಿಡುವಂತೆ ಹೈಕಮಾಂಡ್ ಬಳಿ ಇಂಗಿತ ವ್ಯಕ್ತಪಡಿಸಿದ್ದೇನೆ’ ಆದರೆ ಮುಂದಿನ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ಅಲ್ಲದೇ ಸುರೇಶ್ ಗೋಪಿ ಅವರು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಊಹಾಪೋಹವಷ್ಟೇ’ ಎಂದು ಸ್ಪಷ್ಟಪಡಿಸುವ ಮೂಲಕ ಈ ವಿಚಾರಗಳನ್ನು ತಳ್ಳಿ ಹಾಕಿದ್ದಾರೆ. ಇನ್ನೆರಡು ದಿನಗಳಲ್ಲಿ ಮಾಧ್ಯಮಗಳ ಮುಂದೆ ಮಾತಾಡಲಿದ್ದೇನೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.