ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಮಾರ್ಗದರ್ಶಕ ಮಂಡಳಿಗೆ ಸೇರಿಸಿತಾ? ಹೀಗೊಂದು ಪ್ರಶ್ನೆ ಹುಟ್ಟುಹಾಕಿದೆ ಭಾರತೀಯ ಜನತಾ ಪಕ್ಷದ ವೆಬ್‌ಸೈಟ್‌ನಿಂದ ತೆಗೆದ ಸ್ಕ್ರೀನ್‌ಶಾಟ್ ‘ಮಾರ್ಗದರ್ಶಕ್ ಮಂಡಲ್’ ವರ್ಗದ ಅಡಿಯಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಫೋಟೋ, ಹೆಸರು ಇರುವ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು 2024ರ ಲೋಕಸಭಾ ಚುನಾವಣೆ ನಂತರದ ಬೆಳವಣಿಗೆ ಎಂದು ವೈರಲ್ ಮಾಡಲಾಗಿದೆ.
ಆದರೆ, ಇದು ಸುಳ್ಳು ಎಂದು ಬೂಮ್ ಪತ್ತೆ ಹಚ್ಚಿದೆ. ಇವರ ಹೆಸರು ಇರುವ ಮಾರ್ಗದರ್ಶಕ ಮಂಡಳಿಯ ಚಿತ್ರ ಈಗಿನದ್ದಲ್ಲ. ಈ ಚಿತ್ರಕ್ಕೂ ಇತ್ತೀಚೆಗೆ ಪೂರ್ಣಗೊಂಡ ಲೋಕಸಭೆ ಚುನಾವಣೆಗೂ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. 2014ರಲ್ಲಿ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರೊಂದಿಗೆ ಬಿಜೆಪಿಯ ಮಾರ್ಗದರ್ಶಕ ಮಂಡಳಿಗೆ ಮೋದಿ ಮತ್ತು ಸಿಂಗ್ ಅವರ ಹೆಸರನ್ನೂ ಸೇರಿಸಲಾಗಿತ್ತು. ಇದು ಆ ಸಮಯದ ಚಿತ್ರ ಎಂದು ಸಾಬೀತಾಗಿದೆ.
ಈ ವೈರಲ್ ಸ್ಕ್ರೀನ್‌ಶಾಟ್ ಅನ್ನು ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿಯೂ ಪೋಸ್ಟ್ ಮಾಡಲಾಗಿದೆ, “ಮೋದಿ ಮತ್ತು ರಾಜನಾಥ್ ಸಿಂಗ್ ಬಿಜೆಪಿಯ ವೆಬ್‌ಸೈಟ್ ಪ್ರಕಾರ ಮಾರ್ಗದರ್ಶಕ ಮಂಡಳಿಯನ್ನು ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಇದು ಬಹುಮತ ಪರೀಕ್ಷೆಯಲ್ಲಿ ಬಿಜೆಪಿ ಸೋಲಲಿದೆ ಎಂಬುದರ ಮುನ್ಸೂಚನೆಯೇ? ಇದು ದುರಂತದ ನಂತರದ ಪೋಸ್ಟಾ?” ಎಂದು ಅದು ಪ್ರಶ್ನಿಸಿದೆ.