ಉತ್ತರಪ್ರದೇಶದ ಶಾಮ್ಲಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ನಡೆದಿದೆ. ಸಂತ್ರಸ್ತೆಯ ಹೇಳಿಕೆ ಪ್ರಕಾರ, ಆರೋಪಿಗಳು ತಂಪು ಪಾನೀಯದಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಆಕೆಗೆ ನೀಡಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಭವನ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿ-ಸಹಾರನ್‌ಪುರ ರಸ್ತೆಯಲ್ಲಿರುವ ಹೋಟೆಲ್‌ಗೆ ಕರೆದೊಯ್ದ ನಂತರ ಆರೋಪಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ವರದಿಯ ಪ್ರಕಾರ, ಕೆಲವು ಅಪರಿಚಿತ ಜನರು ಸಾಮಾಜಿಕ ಮಾಧ್ಯಮ ಸೈಟ್ ಮೂಲಕ ತನ್ನೊಂದಿಗೆ ಸ್ನೇಹ ಬೆಳೆಸಿದರು ಮತ್ತು ನಂತರ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಮೋಸಗೊಳಿಸಿದರು ಎಂದು ಮೀರತ್ ಮೂಲದ ಮಹಿಳೆಯೊಬ್ಬರು ಹೇಳಿದ್ದಾರೆ. ಆರೋಪಿಗಳು ಬ್ಯಾಂಕ್‌ನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದರು, ಹೀಗಾಗಿ ತನಗೆ ಕೆಲಸ ನೀಡುವ ನೆಪದಲ್ಲಿ ಮಾತುಕತೆಗಾಗಿ ಹೋಟೆಲ್‌ಗೆ ಭೇಟಿಯಾಗಲು ಕರೆದೊಯ್ದು ಅಲ್ಲಿ ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ನೀಡಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.