ಅಯೋಧ್ಯೆ, ಜೂನ್. 27: ಭಗವಾನ್ ಶ್ರೀರಾಮನ ಊರು ಎಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕಟ್ಟಲಾಗಿದೆ. ವರ್ಷದ ಆರಂಭದಲ್ಲಿ ಅದ್ಧೂರಿಯಾಗಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ಕೇವಲ ಐದು ತಿಂಗಳಲ್ಲೇ ರಾಮಮಂದಿರಕ್ಕೆ ಭೇಟಿ ನೀಡುವವರ ಸಂಖ್ಯೆ ಕುಸಿದಿದೆ.
ಇತ್ತೀಚೆಗೆ ಒಂದು ಮಳೆಗೂ ತಡೆಯದ ರಾಮಮಂದಿರದಲ್ಲಿ ಸೂರಿಕೆ ಆರಂಭವಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಕೋಟ್ಯಾಂತರ ರೂಪಾಯಿ ಸುರಿದು ಕಟ್ಟಿದರೂ ಯಾವುದೇ ಉಪಯೋಗವಿಲ್ಲದಂತಾಗಿದೆ. ಇದರ ಬೆನ್ನಲ್ಲೇ ರಾಮನೂರಿಗೆ ಭೇಟಿ ನೀಡುವವರು ಕಡಿಮೆಯಾಗಿದ್ದು, ವಿಶೇಷ ವಿಮಾನಗಳು, ಬಸ್ಸುಗಳು ಮತ್ತು ಟ್ರೈನುಗಳನ್ನು ಕಡಿಮೆ ಮಾಡಲಾಗಿದೆ.
ಅಯೋಧ್ಯೆಯ ರಾಮಮಂದಿರದ ಬಗ್ಗೆ ಒಮ್ಮೆ ಹೆಚ್ಚಾಗಿದ್ದ ಆಸಕ್ತಿಯು ಕ್ಷೀಣಿಸುತ್ತಿರುವಂತೆ ತೋರುತ್ತಿದೆ. ಕಳೆದ ಆರು ವಾರಗಳಲ್ಲಿ ನಗರಕ್ಕೆ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್ಸುಗಳನ್ನು ಕಡಿತಗೊಳಿಸಲಾಗಿದೆ.
ಇವೆಲ್ಲವೂ ಕೂಡ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದನ್ನು ಸೂಚಿಸುತ್ತದೆ. ಅಯೋಧ್ಯೆಗೆ ಹೋಗಲು ಬೇಡಿಕೆ ಕಡಿಮೆಯಾಗಿರುವ ಕಾರಣ ಹೈದರಾಬಾದ್, ಬೆಂಗಳೂರು ಮತ್ತು ಪಾಟ್ನಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಿಲ್ಲಿಸಿದ ಮೊದಲ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್. ಸೇವೆ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ ಈ ನಿರ್ಧಾರವು ಬಂದಿದೆ. ಏಪ್ರಿಲ್ 2024 ರಲ್ಲಿ, ಸ್ಪೈಸ್ ಜೆಟ್ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನಗಳನ್ನು ಪ್ರಾರಂಭಿಸಿ, ವಾರಕ್ಕೆ ಮೂರು ಬಾರಿ ಕಾರ್ಯನಿರ್ವಹಿಸುತ್ತದೆ ಎಂದಿತ್ತು. ಜೂನ್ 1 ರಂದು ಕೊನೆಯ ವಿಮಾನ ಹೋಗಿದೆ.
ಸದ್ಯ ಇಂಡಿಗೋ ಮತ್ತು ಏರ್ ಇಂಡಿಯಾ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನಯಾನ ಸೇವೆಯನ್ನು ಮುಂದುವರೆಸಿದೆ. ಅಯೋಧ್ಯೆಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದೇ ಈ ಕಡಿತಕ್ಕೆ ಕಾರಣ ಎಂದು ಏರ್‌ಲೈನ್ ಕಂಪನಿ ಉದ್ಯೋಗಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಹವಾಮಾನ ಪರಿಸ್ಥಿತಿ ಸರಿಯಾದ ಮೇಲೆ ವಿಮಾನಯಾನ ಆರಂಭವಾಗುವ ಲಕ್ಷಣಗಳಿವೆ.
ಭಾರತೀಯ ರೈಲ್ವೆ ಕೂಡ ಅಯೋಧ್ಯೆಗೆ ವಿಶೇಷ ರೈಲುಗಳನ್ನು ನಿಲ್ಲಿಸಿದೆ. ಪವಿತ್ರಾಭಿಷೇಕದ ನಂತರ ಯಾತ್ರಾರ್ಥಿಗಳಿಗಾಗಿ ಪರಿಚಯಿಸಲಾದ ಆಸ್ತಾ ವಿಶೇಷ ರೈಲುಗಳನ್ನು ಬೇಡಿಕೆ ಕಡಿಮೆಯಾದ ಕಾರಣ ಸ್ಥಗಿತಗೊಳಿಸಲಾಗಿದೆ. ಇದರ ಹೊರತಾಗಿಯೂ, ಪ್ರತಿದಿನ 32 ರಿಂದ 35 ರೈಲುಗಳು 28,000 ಪ್ರಯಾಣಿಕರನ್ನು ಹೊತತ್ಉ ಅಯೋಧ್ಯಾ ಧಾಮ್ ಮತ್ತು ಅಯೋಧ್ಯಾ ಕ್ಯಾಂಟ್ ನಿಲ್ದಾಣಗಳಿಗೆ ಆಗಮಿಸುತ್ತಿವೆ. ಮೇ 15 ರವರೆಗೆ ಅಯೋಧ್ಯೆಗೆ ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ, ನಂತರ ಸ್ವಲ್ಪ ಕಡಿಮೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್ ಸಂಚಾರವನ್ನು ಕಡಿತಗೊಳಿಸಲಾಗಿದೆ. ಪ್ರಸ್ತುತ, 396 ರಸ್ತೆಮಾರ್ಗದ ಬಸ್‌ಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇತರ ರಾಜ್ಯಗಳಿಂದ ಬರುವ ಬಸ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಒಂದು ಬಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಫ್ರಿ ಪ್ರೆಸ್ ಜರ್ನಲ್ ವರದಿ ಮಾಡಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಯಿತು. ಜನವರಿಯಿಂದ ಮಾರ್ಚ್ 2024 ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ, ಏಪ್ರಿಲ್‌ನಲ್ಲಿ ಈ ಸಂಖ್ಯೆ ಕಡಿಮೆಯಾಯಿತು ಮತ್ತು ಏಪ್ರಿಲ್‌ನಿಂದ ಮೇವರೆಗೆ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು. ಇತ್ತೀಚೆಗೆ, ಈ ಅಂಕಿ ಅಂಶವು 60,000 ಮತ್ತು 80,000 ಕ್ಕೆ ಇಳಿದಿದೆ. ಮಂಗಳವಾರ 83,000, ಶನಿವಾರ 70,000 ಮತ್ತು ಭಾನುವಾರ 78,000 ಭಕ್ತರು ಭೇಟಿ ನೀಡುತ್ತಿದ್ದಾರೆ.