ಕರಾವಳಿಯ ನಂಬಿಕೆ ಆರಾಧನೆಯ ಬಹು ಬೇಡಿಕೆಯ, ಅಭಿಮಾನಿ ಬಳಗ ಹೊಂದಿರುವ ಜಾನಪದ ಕ್ರೀಡೆ ಕಂಬಳ.
ಇದೀಗ ಕಂಬಳದ ನಿಯಮಗಳಲ್ಲಿ ಭಾರೀ ಬದಲಾವಣೆಗೊಳಿಸಿ ಕಂಬಳ ಸಮಿತಿ ನಿರ್ಧರಿಸಿದೆ.
ಇಲ್ಲಿಯವರೆಗೆ ಒಂದು ಕೂಟದಲ್ಲಿ (ಕಂಬಳದಲ್ಲಿ) 5-6 ಜೊತೆ ಕೋಣ ಓಡಿಸಿದ ಕಂಬಳದ ಓಟಗಾರರು ಇನ್ನು ಮುಂದೆ ಗರಿಷ್ಠ 3 ಜತೆ ಕೋಣಗಳನ್ನು ಮಾತ್ರ ಓಡಿಸಬಹುದು. ಅದರಂತೆ ಕರೆಯ “ಗಂತ್’ನಲ್ಲಿ ಕೋಣ ಬಿಡುವಲ್ಲೂ ಒಬ್ಬರಿಗೆ 3 ಜೊತೆ ಕೋಣ ಬಿಡಲು ಮಾತ್ರ ಅವಕಾಶ ನೀಡಲಾಗಿದೆ.
ನಿಗದಿತ ಸಮಯಕ್ಕೆ ಕಂಬಳ ಮುಕ್ತಾಯವಾಗುವುದಿಲ್ಲ ಹಾಗೂ ಓಟಗಾರರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿಯಮವನ್ನು ಜಾರಿಗೊಳಿಸಲು ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ. ಆಗಸ್ಟ್‌ನಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದು ಮುಂದಿನ ಕಂಬಳದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.
ಈ ನಿಯಮ ಅವಶ್ಯಕತೆ ಏನೂ.?
ಸದ್ಯ ಒಂದು ಕಂಬಳ ಕೂಟದಲ್ಲಿ ಹಲವು ಜೊತೆ ಕೋಣಗಳನ್ನು ಒಬ್ಬನೇ ಓಡಿಸುವ ಪ್ರಮೇಯವಿದೆ. ಒಮ್ಮೆ ಕರೆಯಲ್ಲಿ ಓಡಿ ತತ್‌ಕ್ಷಣವೇ ಮತ್ತೆ ಆತ ಓಟಕ್ಕೆ ಸಿದ್ಧವಾಗಲು ಸಾಧ್ಯವಾಗುತ್ತಿಲ್ಲ ಹಾಗೂ ಪದಕ ಗೆಲ್ಲುವ ಕೋಣಗಳನ್ನು ಸೀಮಿತ ಓಟಗಾರರೇ ಓಡಿಸುತ್ತಿದ್ದರೆ ಹೊಸ ಓಟಗಾರರಿಗೆ ಅವಕಾಶ ಸಿಗುವುದಿಲ್ಲವೆಂಬುದೇ ಪ್ರಮುಖ ಕಾರಣ.
ಜೊತೆಗೆ “ಗಂತ್’ನಲ್ಲಿ ಕೋಣ ಬಿಡುವಲ್ಲಿಯೂ ಹೆಚ್ಚು ಜನರಿರುತ್ತಾರೆ ಹಾಗೂ ಕೆಲವೇ ಮಂದಿ ಹಲವು ಕೋಣಗಳನ್ನು ಬಿಡುತ್ತಾರೆ. ಇಲ್ಲೂ ಹೊಸಬರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲವಾದ್ದರಿಂದ ಹೊಸ ಬದಲಾವಣೆ ಮಾಡಲಾಗಿದೆ.
ಕಳೆದ ಕೆಲವು ಕಡೆ ಕಂಬಳ 2 ದಿನವೂ ಮುಂದುವರಿದಿದ್ದು. ಹೀಗಾಗಿ ಓಟಗಾರ ದೈಹಿಕವಾಗಿ ಬಳಲಿ 5-6 ದಿನಗಳಲ್ಲಿ ಮುಂದಿನ ಕಂಬಳಕ್ಕೆ ಮತ್ತೆ ಚೇತರಿಕೆ ಪಡೆಯುವುದು ಕಷ್ಟ ಸಾಧ್ಯ. ಜೊತೆಗೆ ಹೊಸ ಓಟಗಾರರಿಗೆ ಅವಕಾಶ ಸಿಗಬೇಕು ಎಂದು ಹೊಸ ನಿಯಮಾವಳಿ ಜಾರಿಗೆ ಉದ್ದೇಶಿಸಲಾಗಿದೆ’ ಎಂದು ತೀರ್ಪುಗಾರ ಪ್ರಮುಖರಾದ ವಿಜಯ ಕುಮಾರ್ ಕಂಗಿನಮನೆ ಮಾಹಿತಿ ನೀಡಿದ್ದಾರೆ.
“24 ಗಂಟೆಗಳ ಒಳಗೆ ಕಂಬಳ ಮುಗಿಯಬೇಕು ಎಂಬುದು ಎಲ್ಲರ ಚಿಂತನೆ. ಆದರೆ ಕಾರಣಾಂತರದಿಂದ ಇದು ಆಗುತ್ತಿಲ್ಲ. ಒಬ್ಬ ಆಟಗಾರನೇ ಕೆಲವು ಕೋಣಗಳನ್ನು ಓಡಿಸುವ ಕಾರಣ ಸೆಮಿಫೈನಲ್ ಹಂತಕ್ಕೆ ಬರುವಾಗ ಓಟಗಾರರು ಒತ್ತಡಕ್ಕೆ ಸಿಲುಕುತ್ತಾರೆ. ಸುಸ್ತಾಗಿ ಮತ್ತೆ ಕರೆಗೆ ಬರುವಾಗ ತಡವಾಗುತ್ತದೆ. ಇದಕ್ಕಾಗಿ ನಿಯಮಾವಳಿ ಅನಿವಾರ್ಯ’ ಎಂದು ಪ್ರಮುಖರಾದ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ತಿಳಿಸಿದ್ದಾರೆ.
ಇದರ ಜೊತೆಗೆ ಓಟಗಾರರ ಸಂಖ್ಯೆ ಕಡಿಮೆ ಇರುವ ಕಾರಣದಿಂದ ಒಬ್ಬರಿಗೆ “3 ಜೊತೆ’ ಎಂಬ ನಿಯಮ ಸೂಕ್ತವಾಗುವುದಿಲ್ಲ. ಹೀಗಾಗಿ ಈ ಬಾರಿಗೆ ಹೆಚ್ಚು ಕೋಣಗಳಿಗೆ ಅವಕಾಶ ನೀಡುವ ಅಗತ್ಯ ಇದೆ ಎಂಬ ವಾದವೂ ಕೇಳಿಬಂದಿದೆ.
ಕಳೆದ ಬಾರಿ ಗುರುಪುರ, ಬಳ್ಕುಂಜ, ಕೊಕ್ಕಾಡಿಗೋಳಿ ಕೊಡಂಗೆ ಸಹಿತ 24 (ಬೆಂಗಳೂರು ಹೊರತುಪಡಿಸಿ) ಕಂಬಳ ಆಗಿದೆ. ನವೆಂಬರ್ 18ಕ್ಕೆ ಪ್ರಾರಂಭವಾಗಿತ್ತು. ಆದರೆ ಈ ಬಾರಿ ನವೆಂಬರ್ ಮೊದಲ ವಾರದಲ್ಲೇ ಕಂಬಳ ಆರಂಭಿಸಿ ಮಾರ್ಚ್ ಕೊನೆಯ ವೇಳೆಗೆ ಎಲ್ಲ ಕಂಬಳ ಮುಗಿಸಬೇಕು ಎಂಬುದು ಈ ಬಾರಿಯ ಲೆಕ್ಕಾಚಾರ.
ಏಪ್ರಿಲ್‌ನಲ್ಲಿ ಬಿಸಿಲು ಅಧಿಕವಿರುವಾಗ ಕಂಬಳ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಾರಿ ಶಿರ್ವದಲ್ಲಿ ಹೊಸ ಕಂಬಳ ನಡೆಯುವ ಕಾರಣದಿಂದ ಒಟ್ಟು ಕಂಬಳ ಸಂಖ್ಯೆ 25ಕ್ಕೆ ಏರಿಕೆಯಾಗಲಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ “ಬೆಂಗಳೂರು ಕಂಬಳ’ ನವೆಂಬರ್ ಮಧ್ಯದಲ್ಲಿ ನಡೆಯುವ ನಿರೀಕ್ಷೆಯಿದೆ.
ಸುಮಾರು 4 ವರ್ಷಗಳ ಹಿಂದೆ ಕಂಬಳದಲ್ಲಿ ಇದೇ ನಿಯಮ ಇತ್ತು. ಒಬ್ಬನಿಗೆ 3 ಜತೆ ಕೋಣ ಓಡಿಸಲು ಮಾತ್ರ ಅವಕಾಶವಿತ್ತು. ಕಟ್ಟುನಿಟ್ಟಾಗಿ ಇದು ಜಾರಿಯೂ ಆಗಿತ್ತು. ಆಗ ಬೆಳಗ್ಗೆ ಆಗುವ ಮುನ್ನವೇ ಕಂಬಳ ಮುಕ್ತಾಯವಾಗುತ್ತಿತ್ತು. ಇಂತಹುದೇ ನಿಯಮ ಈ ಬಾರಿಯಿಂದಲೂ ಜಾರಿಯಾದರೆ ಉತ್ತಮ ಎಂಬ ಸಲಹೆ ಬಂದಿದೆ. ಈ ನಿಟ್ಟಿನಲ್ಲಿ ಮುಂದಿನ ಮಹಾಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂಬಳ ಶಿಸ್ತು ಸಮಿತಿ ಅಧ್ಯಕ್ಷರಾದ ಭಾಸ್ಕರ್ ಎಸ್.ಕೋಟ್ಯಾನ್ ಹೇಳಿಕೆ ನೀಡಿದ್ದಾರೆ.
ರಾಮ ಲಕ್ಷಣ ಕಂಬಳ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಅವರ ಅನುಪಸ್ಥಿತಿಯಲ್ಲಿ ಸಂಸದರಾಗಿ ಆಯ್ಕೆಯಾದ ಕಾರಣ ಅಭಿನಂದನೆ ಸಲ್ಲಿಸಲಾಯಿತು.