ಅಡಿಕೆ ಮತ್ತು ಕಾಳು ಮೆಣಸಿಗೆ ಇನ್ಯೂರೆನ್ಸ್ ಪ್ರೀಮಿಯಮ್ ಕಟ್ಟಲು ದಿನಾಂಕವನ್ನು ನಿಗದಿ ಮಾಡಲಾಗಿದೆ. ಸರ್ಕಾರವು 2024-25ರ ಮುಂಗಾರು ಹಂಗಾಮಿನ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನದ ಆದೇಶ ಹೊರಡಿಸಿದೆ. ಮಲೆನಾಡು ಮತ್ತು ಕರಾವಳಿ ವ್ಯಾಪ್ತಿಯ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಮಾ ನೋಂದಣಿಗೆ ಅವಕಾಶ ಕಲ್ಪಿಸಿದೆ.
ವಿಮಾ ಯೋಜನೆಗೆ ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಿಗೆ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಲು ಜು.31 ಅಂತಿಮ ದಿನವಾಗಿದೆ. ವಿಮಾ ನೊಂದಣಿಗೆ ರೈತರು ಕಟ್ಟಬೇಕಾದ ಪ್ರೀಮಿಯಮ್ ಮೊತ್ತ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳ ವಿಮಾ ಕಂತು ವಿಮಾ ಮೊತ್ತದ ಶೇಕಡ 5ರಷ್ಟಿರುತ್ತದೆ. ಉಳಿದ ಬಾಕಿ ಪ್ರೀಮಿಯಮ್‌ನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಲಿವೆ.
ಮಲೆನಾಡು ಮತ್ತು ಕರಾವಳಿ ವ್ಯಾಪ್ತಿಯ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಮಾ ನೊಂದಣಿಗೆ ರೈತರು ಕಟ್ಟಬೇಕಾದ ಪ್ರೀಮಿಯಮ್ ಮೊತ್ತ ಅಡಿಕೆಗೆ ಹೆಕ್ಟೇರ್‌ಗೆ 6,400 ರೂ. ಮತ್ತು ಕರಿಮೆಣಸಿಗೆ 2,350 ರೂ. ಹೆಕ್ಟೇರ್ ಆಗಿರುತ್ತದೆ.
-ಬೆಳೆ ಸರ್ವೆ ಆಗಿರಬೇಕು (ಕಳೆದ ವರ್ಷ ಬೆಳೆ ಸರ್ವೆಯಲ್ಲಿ ಲೋಪ ದೋಷಗಳು ಉಂಟಾಗಿದ್ದು, ನಂತರ ಅದನ್ನು ಸರಿ ಪಡಿಸುವ ಪ್ರಕ್ರಿಯೆಯೂ ಆಗಿತ್ತು. ಆದರೆ, ಕೆಲವು ಅಡಿಕೆ ಬೆಳೆಗಾರ RTC (ಪಹಣಿ) ಯಲ್ಲಿ, ಈಗಲೂ ಅಡಿಕೆ ತೋಟದ ವಿಸ್ತೀರ್ಣದಲ್ಲಿ ದೋಷ ಇರುವ ಬಗ್ಗೆ ದೂರುಗಳಿದ್ದು, ವಿಮೆ ಮಾಡಿಸಿಕೊಳ್ಳ ಬಯಸುವ ರೈತರು ಹತ್ತಿರದ ಕಂದಾಯ ಇಲಾಖೆ ಮತ್ತು ತಹಸೀಲ್ದಾರ್ ಕಛೇರಿಗಳನ್ನು ಸಂಪರ್ಕಿಸಿ. ವಿಸ್ತೀರ್ಣ ದೋಷಗಳನ್ನು ಸರಿಪಡಿಸಿಕೊಳ್ಳಬೇಕು.
ಹಿಂದಿನ ವರ್ಷಗಳಲ್ಲಿ, ವಿಸ್ತೀರ್ಣ ದೋಷ, ಬೆಳೆ ಕಾಲಮ್‌ನಲ್ಲಿ ಬೆಳೆ ನಮೂದಾಗಿಲ್ಲದಿರುವ ಸಮಸ್ಯೆ ಇದ್ದಾಗ, ಬೆಳೆ ದೃಡೀಕರಣ ಪತ್ರವನ್ನು ಮಾನಿಸಿ, ವಿಮೆ ನೊಂದಣಿ ಮಾಡಿ ಕೊಳ್ಳಲಾಗುತ್ತಿತ್ತು. ಆದರೆ, ಈಗ ಆ ಸಾಧ್ಯತೆ ಇರುವುದಿಲ್ಲ ಮತ್ತು ರೈತರು ವಿಮೆ ನೊಂದಣಿ ಮಾಡಿಸಿಕೊಳ್ಳುವ ಮೊದಲೇ RTC ಯಲ್ಲಿ ಇರಬಹುದಾದ ದೋಷಗಳನ್ನು ಸರಿ ಪಡಿಸಿಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
-ಆಧಾರ್ ಕಾರ್ಡ್ ಆ್ಯಕ್ಟಿವ್/ಮ್ಯಾಪಿಂಗ್ ಆಗಿರಬೇಕು. ಆಧಾರ್ ಮ್ಯಾಪಿಂಗ್ ಎನ್ನುವುದು ಬ್ಯಾಂಕ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಾಗಿದ್ದು, ಇದನ್ನು NCPI (National Payments Corporation of India) ಸುಗಮಗೊಳಿಸುತ್ತದೆ. ನಿರ್ದಿಷ್ಟ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿ, ಆಯಾ ಬ್ಯಾಂಕ್‌ಗೆ ಪರಿಹಾರ ಹಣ ನೇರ ವರ್ಗಾವಣೆಗಾಗಿ ಮತ್ತು ಗ್ರಾಹಕರು ಒಪ್ಪಿಗೆ ನೀಡಿದ ಇತರ ನೇರ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಈ ಸಿಸ್ಟಮ್ ಮಾಡಲಾಗಿರುತ್ತದೆ. ಕಳೆದ ವರ್ಷ NPCI ಆ್ಯಪ್‌ಡೇಟ್ ಆಗದೆ, ಅನೇಕ ರೈತರಿಗೆ ಪರಿಹಾರ ಬರುವಲ್ಲಿ ತಡವಾಗಿತ್ತು.
-ರೈತರು ಆಧಾರ್ ಪಹಣಿ ಸೀಡಿಂಗ್‌ನ್ನು ಗ್ರಾಮ ಲೆಕ್ಕಿಗರ (ವಿಲೇಜ್ ಅಕೌಂಟೆಂಟ್) ಮೂಲಕ ಮಾಡಿಸಿಕೊಳ್ಳಬೇಕು ಎಂದು ಈಗಾಗಲೆ ಸರಕಾರ ಐದಾರು ತಿಂಗಳ ಮುಂಚೆ ಸೂಚನೆ ಕೊಟ್ಟಿತ್ತು. ಸರ್ಕಾರದ ಮುಂದಿನ ಯಾವುದೇ ಸವಲತ್ತು, ಸಬ್ಸಿಡಿ, ಲೋನ್, ವಿಮಾ ಪರಿಹಾರ ಪಡೆಯಲು ತಮ್ಮ ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿರುತ್ತದೆ ಎಂದು ಸರಕಾರ ಪ್ರಕಟಣೆ ನೀಡಿತ್ತು. ಪ್ರಸಕ್ತ 2024-25ರ ಮುಂಗಾರು ಹಂಗಾಮಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್‌ಲೈನ್ ಪೋರ್ಟಲ್ (samrakshane.karnataka.gov.in) ಮೂಲಕ ನೊಂದಾಯಿಸಲು ಆದೇಶಿಸಲಾಗಿರುತ್ತದೆ.
ಈ ಯೋಜನೆಯಲ್ಲಿ ಒಳಪಡಿಸಲಾಗಿರುವ ಅಡಿಕೆ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರನ್ನು ಒಳಪಡಿಸಬೇಕಾಗಿರುತ್ತದೆ. ಆದರೆ, ಬೆಳೆ ಸಾಲ ಪಡೆದ ರೈತರು ವಿಮೆ ಮಾಡಿಸುವುದನ್ನು ಇಚ್ಛಿಸದಿದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬ್ಯಾಂಕುಗಳಲ್ಲಿ ಸಾಲ ಪಡೆಯದ ರೈತರೂ ವಿಮೆಯನ್ನು ಹತ್ತಿರದ ಬ್ಯಾಂಕಿನಲ್ಲಿ, ಗ್ರಾಮೀಣ ಸಹಕಾರಿ ಸಂಘಗಳಲ್ಲಿ, CSC (ಕಾಮನ್ ಸರ್ವಿಸ್ ಸೆಂಟರ್) ಅಥವಾ ಗ್ರಾಮ ಒನ್‌ಗಳಲ್ಲಿ ನಿಗದಿತ ಪ್ರೀಮಿಯಮ್ ಕಟ್ಟಿ ನೊಂದಾಯಿಸಬಹುದಾಗಿರುತ್ತದೆ. ಹವಾಮಾನ ವೈಪರೀತ್ಯಕ್ಕೆ ಬೆಳೆ ವಿಮೆ ಮಾಡಿಸುವುದು ಭದ್ರತೆಯ ದೃಷ್ಟಿಯಿಂದ ಅಡಿಕೆ/ಮೆಣಸು ಬೆಳೆಗಾರರಿಗೆ ಒಂದು ವರದಾನವೇ ಸರಿ.