ಡೆಹ್ರಾಡೂನ್: ದೇವನಾಡು ಉತ್ತರಾಖಂಡದಲ್ಲಿ ಸುರಂಗ ಕಾಮಗಾರಿ ವೇಳೆ ಭೀಕರ ಭೂ ಕುಸಿತ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಅಲ್ಲಿನ ಸಿಬ್ಬಂದಿ ಪಾರಾಗಿದ್ದಾರೆ.
ಚಮೋಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಕಾಮಗಾರಿ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಈ ಭೀಕರ ಭೂ ಕುಸಿತ ಸಂಭವಿಸಿದೆ. ಕಲ್ಲಿನ ರಾಶಿ ಬೀಳುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ ಓಡಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರಾಖಂಡದಲ್ಲಿ ಕಳೆದೊಂದು ತಿಂಗಳಿನಿಂದ ವ್ಯಾಪಕ ಮಳೆಯಾಗುತ್ತಿದ್ದು, ಇದು ಗುಡ್ಡಪ್ರದೇಶಗಳಲ್ಲಿ ಮಣ್ಣಿನ ಸವೆತಕ್ಕೆ ಕಾರಣವಾಗಿದೆ. ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರದೇಶದಲ್ಲಿ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದು ಕಾಮಗಾರಿ ನಡೆಸುತ್ತಿದ್ದು, ಯಾವ ಕ್ಷಣದಲ್ಲಿ ಯಾವ ಗುಡ್ಡ ಕುಸಿಯುತ್ತದೆ ಎಂಬ ಭೀತಿಯಲ್ಲೇ ಕೆಲಸ ಮಾಡಬೇಕಿದೆ.
ಮಳೆ ಮತ್ತು ಪ್ರವಾಹದ ಜೊತೆಗೇ ಭೂ ಕುಸಿತ ಕೂಡ ಉತ್ತರಾಖಂಡದಲ್ಲಿ ಸಾಮಾನ್ಯ ಎಂಬಂತಾಗಿದೆ. ಕಳೆದವಾರವಷ್ಟೇ ಕೇದಾರನಾಥ್ ಟ್ರೆಕಿಂಗ್ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿ ಓರ್ವ ಸ್ಥಳೀಯ ಮೃತಪಟ್ಟಿದ್ದ.