ನೆಲ್ಯಾಡಿ: ನೆಲ್ಯಾಡಿ-ಚಿತ್ರದುರ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಸಾಧುವಲ್ಲ ಎಂದು ರಾಜ್ಯ ಸರಕಾರ ಈ ಯೋಜನೆಯನ್ನು ಕೈಬಿಟ್ಟಿದೆ.
ಭಾರತಮಾಲಾ ಕಾರ್ಯಕ್ರಮದಡಿ ಮಂಗಳೂರು ಬಂದರಿನಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನೆಲ್ಯಾಡಿಯಿಂದ ಮೂಡಿಗೆರೆ(ಶಿಶಿಲ-ಬೈರಾಪುರ ಮಾರ್ಗ), ಮೂಡಿಗೆರೆ ಹ್ಯಾಂಡ್ ಪೋಸ್ಟ್, ಚಿಕ್ಕಮಗಳೂರು ಬೈಪಾಸ್, ಚಿಕ್ಕಮಗಳೂರಿನ ತಮಟದಹಳ್ಳಿ ಮೂಲಕ ಚಿತ್ರದುರ್ಗವನ್ನು ತಲುಪುವಂತೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆ ರೂಪಿಸಲಾಗಿತ್ತು.
ಒಟ್ಟು 352 ಕಿ.ಮೀ.ಉದ್ದದ 6 ಸಾವಿರ ಕೋಟಿ ರೂ.ಅಂದಾಜು ವೆಚ್ಚದ ಈ ಚತುಷ್ಪಥ ದಟ್ಟವಾದ ಕಾಡು ಹಾಗೂ ಬೆಟ್ಟ ಶ್ರೇಣಿಯ ಮೂಲಕ ಹಾದು ಹೋಗುವುದರಿಂದ ವನ್ಯ ಜೀವಿಗಳ ಓಡಾಟಕ್ಕೆ ಕುತ್ತು ತರುವುದಲ್ಲದೆ ಬಾಳೂರು, ಮೀಯಾರು ಮತ್ತು ಕಬ್ಬಿನಾಲೆ ಮೀಸಲು ಅರಣ್ಯಗಳನ್ನು ನಾಶಪಡಿಸುವ ಆತಂಕವಿದೆ ಎಂದು ವೈಲ್ಡ್ ಕ್ಯಾಟ್ ಸಿ ಸಂಸ್ಥೆಯು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಹೆದ್ದಾರಿ ನಿರ್ಮಾಣವಾದಲ್ಲಿ ಮಳೆ ಕಾಡುಗಳು ನಾಶವಾಗಿ ನೇತ್ರಾವತಿ ನದಿ ಹರಿವಿಗೂ ಧಕ್ಕೆ ಉಂಟಾಗುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ಆಗುವ ಉತ್ಖನನದಿಂದ ಬೆಟ್ಟ ಕುಸಿತ ತೀವ್ರವಾಗುವ ಹಾಗೂ ಮೂರು ದೊಡ್ಡ ನೀರಿನ ಮೂಲಗಳಿಗೂ ಧಕ್ಕೆ ತರುವ ಅಪಾಯವಿತ್ತು. ಜೊತೆಗೆ ಪ್ರಾಣಿ ಹಾಗೂ ಮನುಷ್ಯ ಸಂಘರ್ಷ ಹೆಚ್ಚಾಗುವ ಆತಂಕ ಎದುರಾಗಿದ್ದರಿಂದ ರಾಜ್ಯ ಸರಕಾರ ಈ ಯೋಜನೆಯನ್ನು ಕೈಬಿಟ್ಟಿದೆ.