ಬೆಂಗಳೂರು: ಬಿಜೆಪಿ-ಜೆಡಿಎಸ್ ಎರಡೂ ಪಕ್ಷದ ಮುಖಂಡರು ಸುದೀರ್ಘ ಚರ್ಚೆ ಮಾಡಿ ಆ.3ರಿಂದ 10ರವರೆಗೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ. ವಾಲ್ಮೀಕಿ ನಿಗಮ ಅಕ್ರಮ, ಮುಡಾ ನಿವೇಶನ ಹಗರಣ, ಎಸ್‌ಸಿಎಸ್‌ಪಿ, ಟಿಎಸ್‌ಟಿ ಹಣ ಗ್ಯಾರಂಟಿಗಳಿಗೆ ಬಳಕೆ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿನವರೆಗೂ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡಲಿದ್ದೇವೆ.
ಆ.3ರಂದು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆ.10 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಕೇಂದ್ರದ ನಾಯಕರು ಬರಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಾದಯಾತ್ರೆ ಸಂಬಂಧ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿದ್ದಾರೆ. ಸಮನ್ವಯ ಸಭೆಗೂ ಮುನ್ನ ಬಿಜೆಪಿ ಪ್ರಮುಖರ ಸಭೆ ನಡೆದಿದ್ದು, ಸಭೆಯಲ್ಲಿ ಅತಿವೃಷ್ಟಿ ಬಗ್ಗೆ ಚರ್ಚೆಯಾಗಿದೆ. ಕಾರವಾರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹಲವು ಸಮಸ್ಯೆ ಉಂಟಾಗಿವೆ. ಹೀಗಾಗಿ ಪಾದಯಾತ್ರೆಗೂ ಮೊದಲು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಿಜೆಪಿ ನಿಯೋಗ ರಚನೆ ಮಾಡಲಾಗಿದೆ.
ಪಾದಯಾತ್ರೆ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿ, ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕಾಗಿದೆ. ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಹತ್ತಾರು ಸಾವಿರ ಜನ ಬರಲಿದ್ದಾರೆ. ಸಿಎಂ ರಾಜೀನಾಮೆ ಕೊಡುವವರೆಗೆ ವಿರಮಿಸಲ್ಲ. ಸಿಎಂಗೆ ಗೌರವ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.