ರಾಜ್ಯದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಸದ್ಯ ಸಂಘ ಖಡಕ್ ಮಾರ್ಗದರ್ಶನ ಮಾಡಿದೆ. ಬಿಜೆಪಿಯ ಹಿರಿಯ ನಾಯಕರ ಜೊತೆ ಸಭೆ ನಡೆಸಿರುವ ಸಂಘದ ಪ್ರಮುಖ ಸದಸ್ಯರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರಿಗೆ ಒಗ್ಗಟ್ಟಿನಿಂದ ಹೋಗುವಂತೆ ಆರ್‌ಎಸ್‌ಎಸ್ ಮುಖಂಡರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಬಿಜೆಪಿ ನಾಯಕರಿಗೆ ಸಂಘದಿಂದ ಡ್ರಿಲ್ ಮಾಡಲಾಗಿದೆ. ಆರಂಭದಲ್ಲೇ ಕ್ಲಾಸ್ ತೆಗೆದುಕೊಂಡ ಬಳಿಕ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಸೂಚನೆ ನೀಡಿದ್ದಾರೆ. ಬಿಜೆಪಿ ಅನೇಕ ಮುಖಂಡರು ಆರ್‌ಎಸ್‌ಎಸ್‌ನ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಎಲ್ಲರಿಂದಲೂ ಅಭಿಪ್ರಾಯ, ಅಹವಾಲು ಆಲಿಸಿದ ಆರ್‌ಎಸ್‌ಎಸ್ ಮುಖಂಡ ಮುಕುಂದ್ ಮತ್ತು ಬಿ.ಎಲ್ ಸಂತೋಷ್ ನಂತರ ಪಕ್ಷದೊಳಗಿನ ಭಿನ್ನಮತ, ಒಗ್ಗಟ್ಟಿನ ಕೊರತೆ, ವಿಜಯೇಂದ್ರರ ನಡೆ ಕುರಿತು ಸಂಘದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ವಿಜಯೇಂದ್ರಗೆ ಸೂಚನೆ
ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಕೊಂಡು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ಬಿವೈ ವಿಜಯೇಂದ್ರಗೆ ತಾಕೀತು ಮಾಡಿದ್ದಾರೆ. ಬಹಿರಂಗ ಹೇಳಿಕೆ, ಗುಂಪುಗಾರಿಕೆ, ಪ್ರತ್ಯೇಕ ಸಭೆ ನಡೆಸಿದ ಭಿನ್ನಮತೀಯ ಶಾಸಕರು, ಮುಖಂಡರಿಗೂ ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ, ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗುವಂತೆ ಸಂಘದ ಪ್ರಮುಖರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಚಲೋಗೆ ಸಂಘದಿಂದ ಒಪ್ಪಿಗೆ
ಹೌದು, ರಾಜ್ಯ ಸರ್ಕಾರದ ವಿರುದ್ದದ ಹೋರಾಟ ತೀವ್ರಗೊಳಿಸಲ ಸೂಚನೆ ನೀಡಿರುವ ಸಂಘದ ಪ್ರಮುಖರು, ಇಂದಿನ ಆರ್‌ಎಸ್‌ಎಸ್ ಸಭೆಯಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ವಿರುದ್ಧದ ಹೋರಾಟ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ. ಒಟ್ಟಿಗೆ ಪಕ್ಷದ ವೇದಿಕೆಯಲ್ಲಿ ಬಳ್ಳಾರಿ ಚಲೋ ಮಾಡುವಂತೆಯೂ ತಾಕೀತು ಮಾಡಿದ್ದಾರೆ. ಮೇಲಾಟ, ಪ್ರತಿಷ್ಠೆ ಕೈಬಿಟ್ಟು ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಹೋರಾಟಕ್ಕೆ ಸೂಚನೆ ನೀಡಿದ್ದಾರೆ.
ಬಳ್ಳಾರಿ ಚಲೋ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ
ಬಳ್ಳಾರಿ ಚಲೋ ಸ್ವರೂಪ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸುವಂತೆ ಸೂಚಿಸಿರುವ ಸಂಘದ ಪ್ರಮುಖರು, ನೀವು ನೀವೇ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳದೆ ಹಿರಿಯ-ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.