ಪುತ್ತೂರಿನವರೇ ಹೆಚ್ಚಾಗಿ ಸೇರಿ ಮಾಡಿರುವ ಚಿತ್ರವೊಂದು ಚಿತ್ರರಂಗದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. ‘ಜಂಗಲ್ ಮಂಗಲ್’ ಎಂಬ ವಿಶಿಷ್ಠ ಶೀರ್ಷಿಕೆ ಹೊಂದಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಸಲಗ ಕೆ.ಜಿ.ಫ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಹೆಸರುವಾಸಿಯಾಗಿರುವ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಸರ್ಕಸ್ ಎಂಬ ತುಳು ಚಿತ್ರದಲ್ಲೂ ಖಳನಾಯಕನಾಗಿ ನಟಿಸಿ ಜನಮನ ಗೆದ್ದಿರುವ ಯಶ್ ಶೆಟ್ಟಿ ಈ ಸಿನಿಮಾದ ಈ ಸಿನಿಮಾದ ನಾಯಕ ನಟ.
ಅಂದ ಹಾಗೇ ‘ಜಂಗಲ್ ಮಂಗಲ್’ ಸಿನಿಮಾ ಅರೆ ಮಲೆನಾಡಿನಲ್ಲಿ ನಡೆಯುವ ಪ್ರೇಮ ಕಥೆಯಾಗಿದೆ. ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ ಹೊರತಾಗಿ ಉಗ್ರಂ ಮಂಜು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಯಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಹರ್ಷಿತಾ ರಾಮಚಂದ್ರ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ ದಿವ್ಯಾ ಎನ್ನುವ ಪಾತ್ರದಲ್ಲಿ ಹರ್ಷಿತಾ ಅವರು ಅಭಿನಯಿಸುತ್ತಿದ್ದು ಜವಾಬ್ದಾರಿಯುತ ಕರಾವಳಿಯ ಹೆಣ್ಣು ಮಗಳಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜವಾಬ್ದಾರಿ ಇಲ್ಲದ ಹುಡುಗನನ್ನು ಪ್ರೀತಿಸಿರುವ ಈಕೆಗೆ ಇರುವುದೇ ಎರಡು ಆಯ್ಕೆ. ಒಂದು ಕಡೆ ಕುಟುಂಬವಾದರೆ, ಇನ್ನೊಂದು ಕಡೆ ಪ್ರೀತಿ. ನಾಯಕಿ ದಿವ್ಯಾ ಯಾವುದನ್ನು ಆಯ್ಕೆ ಮಾಡುತ್ತಾಳೆ ಎಂಬುದು ಸಿನಿಮಾ ನೋಡಿದ ಬಳಿಕವಷ್ಟೆ ತಿಳಿಯಬೇಕಿದೆ.
ನಮ್ಮದೇ ಪುತ್ತೂರಿನ ಬೆಳ್ಳಿಪ್ಪಾಡಿ ರಕ್ಷಿತ್ ಕುಮಾರ್ ಎಂಬವರು ಈ ಚಿತ್ರದ ನಿರ್ದೇಶಕರು. ಚಿತ್ರದ ಛಾಯಾಗ್ರಾಹಕ ವಿಷ್ಣು ಪ್ರಸಾದ್ ಹಾಗೂ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ, ಇವರು ಕೂಡ ಪುತ್ತೂರಿನವರೇ ಎಂಬುದು ವಿಶೇಷ. ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮುಂತಾದ ಅನೇಕ ಅನುಭವಿ ತಾರಗಣ ಹೊಂದಿರುವ ಈ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರು ಅರ್ಪಿಸುತ್ತಿದ್ದಾರೆ.
ಕಾಡಿನಿಂದ ಸುತ್ತುವರಿದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ.
ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಸಂಪೂರ್ಣವಾಗಿ ಚಿತ್ರೀಕರಣ ನಡೆದು, ಬಿಡುಗಡೆಗೆ ಅಂತಿಮ ಹಂತದ ತಯಾರಿಯಲ್ಲಿದೆ.