ಜ.22ಕ್ಕೆ ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ವರ್ಷಾಚರಣೆ ಇಲ್ಲ, ಕಾರಣವೇನು
ಕಳೆದ ವರ್ಷ ಜನವರಿ 22ಕ್ಕೆ ಭವ್ಯ ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಮಾಡಲಾಗಿತ್ತು. ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಜನವರಿ 22ಕ್ಕೆ ಪ್ರಾಣಪ್ರತಿಷ್ಠೆಯ ಮೊದಲ ವರ್ಷಾಚರಣೆ ಸಂಭ್ರಮ ರಾಮ ಮಂದಿರದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣವೇನು? ಆಯೋಧ್ಯೆ(ನ.26) ಬರೋಬ್ಬರಿ 500 ವರ್ಷಗಳ ಬಳಿಕ ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿ ಇದೀಗ ವರ್ಷ ಕಳೆಯುತ್ತಿದೆ. ಕಳೆದ ಜನವರಿ 22ರಂದು ಪ್ರದಾನಿ ನರೇಂದ್ರ ಮೋದಿ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಇಡೀ ದೇಶವೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ, ರಾಮ ಮಂದಿರ ಲೋಕಾರ್ಪಣೆಯನ್ನು ಸಂಭ್ರಮಿಸಿದೆ. ಬಳಿಕ ಲಕ್ಷಾಂತರ ಭಕ್ತರು ಆಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಇದೀಗ 2025ರ ಜನವರಿ 22ಕ್ಕೆ ರಾಮ ಮಂದಿರ ಪ್ರಾಣ ಪ್ರತಿಷ್ಠಿಗೆ ಒಂದು ವರ್ಷ ತುಂಬಲಿದೆ. ಆದರೆ ರಾಮ ಮಂದಿರದಲ್ಲಿ ಜನವರಿ 22ಕ್ಕೆ ಮೊದಲ ವರ್ಷಾಚರಣೆ ನಡೆಯುವುದಿಲ್ಲ ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ.
ಆಯೋಧ್ಯೆ ರಾಮ ಮಂದಿರ ಆಡಳಿತ ನೋಡಿಕೊಳ್ಳುತ್ತಿರು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಾಣಪ್ರತಿಷ್ಠೆ ಕುರಿತು ಗೊಂದಲಕ್ಕೆ ತೆರೆ ಎಳೆದಿದೆ. ಕ್ಯಾಲೆಂಡರ್ ಪ್ರಕಾರ 2025ರ ಜನವರಿ 22ಕ್ಕೆ ಆಯೋಧ್ಯೆ ರಾಮ ಮಂದಿರದ ಪ್ರಾಣಪ್ರತಿಷ್ಠೆಗೆ ಮೊದಲ ವರ್ಷಾಚಣರೆ. ಆದರೆ ಯಾವುದೇ ಹಿಂದೂ ಹಬ್ಬಗಳು, ಹಿಂದೂ ಪೂಜಾ ಪದ್ಧತಿಗಳು ಹಿಂದೂ ಕ್ಯಾಲೆಂಡರ್ ಪ್ರಕಾರ ನಡೆಯಲಿದೆ. ಹೀಗಾಗಿ ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆದ ದಿನ ದ್ವಾದಶಿಯ ಪುಷ್ಯ ಶುಕ್ಲ ಪಕ್ಷ. ಪುಷ್ಯ ತಿಂಗಳ ಪೂರ್ಣ ಚಂದಿರ 12 ದಿನ ಪ್ರಾಣ ಪ್ರತಿಷ್ಠೆ ನೆರವೇರಿಸಲಾಗಿತ್ತು. 2025ರಲ್ಲಿ ಈ ದಿನ ಜನವರಿ 11ರಂದು ಆಗಮಿಸಲಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.ಹಿಂದೂ ದೇಗುಲದ ಪ್ರತಿಯೊಂದು ವಿಚಾರಗಳನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ನಿರ್ಧರಿಸಲಾಗುತ್ತದೆ. ಹೀಗಾಗಿ ಆಯೋಧ್ಯೆ ರಾಮ ಮಂದಿರದ ಮೊದಲ ಪ್ರಾಣಪ್ರತಿಷ್ಠೆ ವರ್ಷಾಚರಣೆಯನ್ನು ಜನವರಿ 11 ರಂದು ನಡೆಸಲಾಗುತ್ತದೆ. ವಿಶೇಷ ಪೂಜೆ ನಡೆಯಲಿದೆ ಎಂದು ಟ್ರಸ್ಟ್ ಹೇಳಿದೆ. ಹಿಂದೂ ಹಬ್ಬಗಳು, ದೇಗುಲಗಳ ಬ್ರಹ್ಮಕಲಶ ಸೇರಿದಂತೆ ಪೂಜೆಗಳು ಹಿಂದೂ ಪಂಚಾಂಗ ಪ್ರಕಾರ ನಡೆಯಲಿದೆ. ಇದೇ ಪಂಚಾಂಗ ಅನುಸಾರ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ವರ್ಷಾಚರಣೆ ಆಚರಿಸಲಿದೆ ಎಂದಿದೆ. ಈ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಟ್ರಸ್ಟ್ ಕರೆದಿದೆ.