ಪುತ್ತೂರು: ವಗಾವಣೆಗೆ ವಿಶೇಷ ಮಾರ್ಗಸೂಚಿ ಸೇರಿದಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ 2ನೇ ಹಂತದ ಅನಿರ್ದಿಷ್ಠಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ನಿರತರನ್ನು ಭೇಟಿಯಾದ ಶಾಸಕ ಅಶೋಕ್ ರೈ ಅವರು 4 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ, ಲ್ಯಾಪ್‍ಟಾಪ್, ಮೊಬೈಲ್ ಹಾಗೂ ನಿಯೋಜನೆ ರದ್ದು ವಿಚಾರಗಳನ್ನು ತಕ್ಷಣ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ನಿಮ್ಮ ಮನವಿ ತಲುಪಿಸುತ್ತೇನೆ. ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ. ಲ್ಯಾಪ್‍ಟಾಪ್ ನೀಡುವ ಬಗ್ಗೆ ಈಗಾಗಲೇ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಸಚಿವರಲ್ಲಿ ಮಾತನಾಡಿದ್ದೇನೆ. ಉಳಿದ ಮೂರು ಬೇಡಿಕೆಗಳೂ ಸಮರ್ಪಕವಾಗಿದೆ. ಈ ಬಗ್ಗೆಯೂ ಚರ್ಚೆ ಮಾಡುತ್ತೇನೆ. ಆದರೆ ಅಂತರ್ ಜಿಲ್ಲಾ ವರ್ಗಾವಣೆ ರಾಜ್ಯಮಟ್ಟದ ವಿಚಾರವಾಗಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಅಧಿವೇಶನದಲ್ಲಿ ಚರ್ಚೆ
ಸಚಿವರೊಂದಿಗೆ ಈ ಎಲ್ಲಾ ವಿಚಾರಗಳ ಚರ್ಚೆ ಮಾಡುತ್ತೇನೆ. ಒಂದು ವೇಳೆ 4 ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸದಿದ್ದಲ್ಲಿ ಮುಂದಿನ ಅಧಿವೇಶನದಲ್ಲಿಯೇ ಚರ್ಚೆ ಮಾಡುತ್ತೇನೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದನ್ನು ಖಂಡಿತವಾಗಿಯೂ ಸರ್ಕಾರ ಮಾಡುತ್ತದೆ. ವಿಎಗಳ ಕಚೇರಿ ಇಲ್ಲದ ಗ್ರಾಮಗಳ ಬಗ್ಗೆ ಪಟ್ಟಿ ಮಾಡಿಕೊಡಿ. ತಲಾ ರೂ.10 ಲಕ್ಷ ಬೇಕಾಗಬಹುದು. ಮೊದಲು ಜಾಗ ಗುರುತಿಸುವ ಕೆಲಸ ಮಾಡಿ ಎಂದು ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಾದ್ಯಂತ ಮುಷ್ಕರ ನಡೆಯುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಚಿಕ್ಕಮಗಳೂರಿನಲ್ಲಿ 30 ವಿಎಗಳ ವೇತನ ಭಡ್ತಿ ತಡೆಯನ್ನು ಕೈಬಿಡಬೇಕು. ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ, ಗುಣಮಟ್ಟದ ಕಚೇರಿ ಹಾಗೂ ಮೂಲಭೂತ ಸೌಕರ್ಯ, ಲ್ಯಾಪ್‍ಟಾಪ್, ಮೊಬೈಲ್, ಅನುಕಂಪ ನೇಮಕಾತಿಯ ವೃಂದ ಹಾಗೂ ನೇಮಕಾತಿಗೆ ತಿದ್ದುಪಡಿ, ಕರ್ತವ್ಯ ಸಂದರ್ಭ ಜೀವಹಾನಿಯಾದರೆ ರೂ.50 ಲಕ್ಷ ಪರಿಹಾರ ನೀಡಬೇಕು. ಪ್ರಯಾಣಭತ್ಯೆ 5 ಸಾವಿರ ನೀಡಬೇಕು. ಬೆಳೆ ಸಮೀಕ್ಷೆ, ಬೆಳೆಹಾನಿ ಪರಿಹಾರದ ಕೆಲಸವನ್ನು ಕೃಷಿ,ತೋಟಗಾರಿಕಾ ಇಲಾಖೆಗಳಿಗೆ ವಹಿಸಬೇಕು. ದಫರ್ ಮತ್ತು ಜಮಾಬಂದಿಯನ್ನು ರದ್ದುಪಡಿಸಬೇಕು. ಪ್ರೋಟೊಕಾಲ್‍ನಿಂದ ಗ್ರಾಮಾಡಳಿತಾಧಿಗಳನ್ನು ಕೈಬಿಡಬೇಕು. ಜಾಬ್‍ಚಾರ್ಟ್ ನಿಗಧಿಪಡಿಸಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಉಮೇಶ್ ಕಾವಡಿ, ತಾಲೂಕು ಅಧ್ಯಕ್ಷ ರಾಧಾಕೃಷ್ಣ ಕೆ.ಎನ್, ಪ್ರಧಾನ ಕಾರ್ಯದರ್ಶಿ ನರಿಯಪ್ಪ, ಕೋಶಾಧಿಕಾರಿ ಅಶ್ವಿನಿ ಕೆ ಸಹಿತ ಹಲವಾರು ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.