ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಸ್ತಾಕ್ ಮಕ್ಬೋಲಿಯನ್ನ ಸಿಸಿಬಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಗಲಭೆ ನಡೆದ 11 ದಿನಗಳ ಬಳಿಕ ಮೌಲ್ವಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಮುಂಜಾಗ್ರತ ಕ್ರಮವಾಗಿ ಉದಯಗಿರಿ ಪೊಲೀಸ್ ಠಾಣೆಗೆ ಬಿಗಿ ಬಂದೂಬಸ್ತ್ ನಿಯೋಜಿಸಲಾಗಿದೆ.
ಇದೇ ಫೆ.10ರಂದು ಉದಯಗಿರಿ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸುವುದಕ್ಕೂ ಮುನ್ನವೇ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಈತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಮೌಲ್ವಿ ಭಾಷಣದಲ್ಲಿ ಹೇಳಿದ್ದೇನು?
ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ. ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತೂ ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಮಾತನಾಡಿದ್ದ.
ನಿಮ್ಮ ಇಚ್ಚೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳನ್ನ ಬೇಕಾದ್ರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದ.