ಉಪ್ಪಿನಂಗಡಿ: ಇಲ್ಲಿನ ಖಾಸಗಿ ಶಾಲಾ ವಿದ್ಯಾರ್ಥಿ ಶ್ರವಣ್ (13) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನಿವಾಸಿ ಡೊಂಬಯ್ಯ ಗೌಡ ಎಂಬವರ ಪುತ್ರ ಶ್ರವಣ್ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮಂಗಳವಾರ ರಾತ್ರಿ ತನ್ನ ಚಿಕ್ಕಮ್ಮನ ಮನೆಯಿಂದ ಕೊಡಲ್ಪಟ್ಟ ಕೋಳಿ ಪದಾರ್ಥದ ಜತೆ ಎರಡೆರಡು ಬಾರಿ ಊಟ ಮಾಡಿ ತಾಯಿಯೊಂದಿಗೆ ಮಲಗಿದ್ದ. ತಾಯಿ ನಿದ್ರೆ ಮಾಡಿದ ಬಳಿಕ ಆತ ರೋಪ್ ಅನ್ನು ಉಪಯೋಗಿಸಿ ಮನೆಯೊಳಗಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಳಿಕೆಯಾಗಿದ್ದ ಕೋಳಿ ಪದಾರ್ಥವನ್ನು ಮರುದಿನ ಬಳಗ್ಗಿನ ಊಟಕ್ಕಾಗಿ ಇರಿಸಬೇಕೆಂದು ಸೂಚಿಸಿದ್ದ. ಈತ ಬುಧವಾರ ಬೆಳಗ್ಗಿನ ಪೂಜೆಗಾಗಿ ರಾತ್ರಿಯೇ ಹೂವಿನ ಮೊಗ್ಗನ್ನು ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. ಶಾಲೆಯಲ್ಲಿಯೂ ಸಹಪಾಠಿಗಳೊಂದಿಗೆ ಸಂತಸದಾಯಕವಾಗಿಯೇ ಇದ್ದ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೃತ ವಿದ್ಯಾರ್ಥಿ ತಂದೆ, ತಾಯಿ,ಓರ್ವ ಸಹೋದರಿಯನ್ನು ಅಗಲಿದ್ದಾನೆ. ಮೃತರ ಗೌರವಾರ್ಥ ಆತ ಕಲಿಯುತ್ತಿದ್ದ ವಿದ್ಯಾಲಯದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.