ಪುತ್ತೂರು: ಜನ ಸ್ನೇಹಿ ಪೊಲೀಸ್ ಅಂದ್ರೆ ಇದೇನಾ? ಸಂಚಾರಿ ಪೊಲೀಸರ ಸೂಚನೆಯನ್ನು ಪಾಲಿಸಲಿಲ್ಲವೆಂಬ ಕಾರಣಕ್ಕೆ ಬೆನ್ನಟ್ಟಿಕೊಂಡು ಬಂದು ಅಟೋ ಚಾಲಕನ ಮೈ ಮೇಲೆ ಕೈ ಮಾಡಿ ಅವಾಚ್ಯ ಪದಗಳಿಂದ ಬೈದು ನಿಂದಿಸಿದ ಘಟನೆ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ.
ಮೂಲಗಳ ಪ್ರಕಾರ, ಹಲ್ಲೆಗೊಳಗಾದ ಆಟೋ ಚಾಲಕ (ಮುಕ್ವೆ ನಿವಾಸಿ) ಶುಕ್ರವಾರ ಸಂಜೆ ದರ್ಬೆ ಸಮೀಪದ ಬೈಪಾಸ್ ರಸ್ತೆಯಲ್ಲಿ ಆಟೋ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಆಗಮಿಸಿದ ಪುತ್ತೂರು ಸಂಚಾರಿ ಪೊಲೀಸರು ಆಟೋ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಆಟೋ ಚಾಲಕ ಡಿವೈಡರ್ ದಾಟಿ ಅಶ್ವಿನಿ ವೃತ್ತದ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ. ಪೊಲೀಸರು ಆಟೋವನ್ನು ಹಿಂಬಾಲಿಸಿಕೊಂಡು ಬಂದು ಕಾಲೇಜು ಮುಂಭಾಗದ ಮುಖ್ಯರಸ್ತೆಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. “ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತೀಯಾ” ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಹಲ್ಲೆಗೊಳಗಾದ ಚಾಲಕನನ್ನು ನಂತರ ಘಟನಾ ಸ್ಥಳದಲ್ಲಿ ಜನ ಸೇರುತಿದ್ದಂತೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಟ್ರಾಫಿಕ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಆಟೋ ರಿಕ್ಷಾವೊಂದನ್ನು ಬೆನ್ನಟ್ಟಿಕೊಂಡು ಬಂದಿರುವುದು, ಬೈಕ್ ನಿಲ್ಲಿಸಿ ರಿಕ್ಷಾವನ್ನು ತಡೆದು ನಿಲ್ಲಿಸಿದ ಪೊಲೀಸರು ರಿಕ್ಷಾವನ್ನು ಆಫ್ ಮಾಡಲು ಸೂಚಿಸಿ ಅಟೋ ರಿಕ್ಷಾದ ಕೀ ಕಿತ್ತುಕೊಳ್ಳಲು ಯತ್ನಿಸುವುದು, ಪೊಲೀಸರ ವಿಡಿಯೋ ಮಾಡುತ್ತೀಯಾ. . ಎಂದು ಪ್ರಶ್ನಿಸುವುದು, ಆತನ ಅಂಗಿಯನ್ನು ಹಿಡಿದೆಳೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಮತ್ತು ಮೈ ಮೇಲೆ ಕೈ ಮಾಡುವುದು, ಹರಿದಾಡುವ ವಿಡಿಯೋ ದೃಶ್ಯಾವಳಿಯಲ್ಲಿ ಕಾಣಿಸಿದೆ.
ಟ್ರಾಫಿಕ್ ಪೊಲೀಸರಿಂದ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಟ್ರಾಫಿಕ್ ಠಾಣೆಗೆ ಸೇರಿದ ಪೊಲೀಸರು ವಾಹನ ತಪಾಸಣೆ ಸಂದರ್ಭದಲ್ಲಿ ಆಟೋ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ನಂತರ ಶಾರೀರಿಕ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿಯೂ ಇಲ್ಲದ ಟ್ರಾಫಿಕ್ ನಿಯಮ ಪುತ್ತೂರಲ್ಲಿ. ಪುತ್ತೂರಿನಲ್ಲಿ ಮಹೇಶ್ ಪ್ರಸಾದ್ ಅವರು ಪೋಲಿಸ್ ಅಧಿಕಾರಿಯಾಗಿದ್ದಾಗ ಪುತ್ತೂರು ನಗರದೆಲ್ಲೆಡೆ ಸಿಸಿ ಕ್ಯಾಮಾರಗಳನ್ನು ಅಳವಡಿಸಿ ಏನೇ ಘಟನೆ ನಡೆದರೂ ಪೊಲೀಸ್ ಠಾಣೆಯಿಂದಲೇ ಸಿಸಿ ಮೂಲಕ ಅದ್ಬುತವಾಗಿ monitor ಮಾಡುತ್ತಿದ್ದರು, ಅದರೆ ಇಂದು ಪುತ್ತೂರು ನಗರದಲ್ಲಿ ಒಂದೇ ಒಂದು ಸಿಸಿ ಕ್ಯಾಮಾರ ಕಾರ್ಯ ನಿರ್ವಹಿಸುತ್ತಿಲ್ಲ, ವಾಹನ ಚಾಲಕರು ಕಳ್ಳರಲ್ಲ, ಎಲ್ಲಾ ನಮ್ಮ ಪುತ್ತೂರು ಅಸುಪಾಸಿನವರೇ, ಅವರ ಅನೇಕ ವೈಯಕ್ತಿಕ ಅಥವಾ ಇತರ ಕೆಲಸ ಕಾರ್ಯಗಳಿಗೆ ಒತ್ತಡದಲ್ಲೇ ಪೇಟೆ ಕಡೆ ಬರುವವರು, ಅದರೆ ಇಲ್ಲಿನ ಕೆಲವು ಟ್ರಾಫಿಕ್ ಪೊಲೀಸರಿಗೆ ಬಡಪಾಯಿ ದಿನಕ್ಕೆ ಐನೂರು ರೂಪಾಯಿ ದುಡಿಯುವ ವರ್ಗದವರೇ ಮೊದಲ ಟಾರ್ಗೆಟ್, ದ್ವಿಚಕ್ರ ವಾಹನದಲ್ಲಿ ಪುಟ್ಟ ಮಕ್ಕಳು, ಮಹಿಳೆಯರು , ವಯಸ್ಕರು, ಆನಾರೋಗ್ಯ ಪೀಡಿತರು ಇದ್ದರೂ ಡೋಂಟ್ ಕೇರ್, ಅವರನ್ನು ಅಡ್ಡಗಟ್ಟಿ ವಸೂಲಿ ಮಾಡಲು ಇದೇನು ಹಪ್ತಾ ವಸೂಲಿಯೇ? ಏಕೆಂದರೆ ಬಡ ವರ್ಗದವರಲ್ಲಿ ಪ್ರತಿರೋಧ ಇರುವುದಿಲ್ಲ, ಬೆದರಿಸಿದ ಕೂಡಲೇ ದಂಡ ಕಟ್ಟಿ ಹೋಗುತ್ತಾರೆ, ಶ್ರೀಮಂತ ವರ್ಗದವರನ್ನು ಮುಟ್ಟುವ ಧೈರ್ಯ ಇವರಿಗೆ ಇದೆಯ? ಪುತ್ತೂರಿನ ಕೆಲವು ಟ್ರಾಫಿಕ್ ಪೊಲೀಸರ ವರ್ತನೆಯನ್ನು ಸಾರ್ವಜನಿಕರು ಖಂಡಿಸಬೇಕಾದ ಸಮಯ
ಈ ವೀಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾರ್ವಜನಿಕರು ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯುವ ವರೆಗೆ ಹಂಚಿಕೊಳ್ಳಿ ಎಂದು ವಿನಂತಿಸಿ ಮತ್ತಷ್ಟು ಗ್ರೂಪುಗಳಿಗೆ ವಿಡಿಯೋ ಹರಿದಾಡುವಂತೆ ಮಾಡಿದ್ದಾರೆ.
ಪ್ರಕರಣದ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದ್ದು, ವಿಡಿಯೋದಲ್ಲಿ ಇಬ್ಬರು ಪೊಲೀಸರ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ತೋರುತ್ತಿದ್ದು, ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು “ಜನಸ್ನೇಹಿ ಪೊಲೀಸ್ ಅಂದ್ರೆ ಇದೇನಾ?” ಎಂದು ಪ್ರಶ್ನೆ ಎತ್ತಿದ್ದಾರೆ.
ಸ್ಥಳೀಯರು ಪೊಲೀಸರ ನಡವಳಿಕೆಯನ್ನು ಖಂಡಿಸಿದ್ದು, ಘಟನೆಯ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
#cmkarnataka
#dig