ಪುತ್ತೂರು: ನಗರಸಭೆ ವ್ಯಾಪ್ತಿಯ ಬೆದ್ರಾಳ ಸಮೀಪದ ನೆಲ್ಲಿಗೇರಿಯಲ್ಲಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಅ.19ರ ಸಂಜೆ ಸಿಡಿಲು ಬಡಿದ ಪರಿಣಾಮ ದಯಾನಂದ ಕುಲಾಲ್ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಅನಂತರಾಮ ಶೆಟ್ಟಿ ಅವರ ಹಂಚಿನ ಮನೆ ಸಂಪೂರ್ಣ ಹಾನಿಗೊಂಡಿದ್ದು, ಹಂಚು ಛಿದ್ರಗೊಂಡಿದೆ. ಬೆದ್ರಾಳದಲ್ಲಿ ಒಂದು ವರ್ಷದ ಮಗು ಸಹಿತ ನಾಲ್ವರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಸಿಡಿಲಿನ ರಭಸಕ್ಕೆ ಮನೆಯ ಗೋಡೆಯಲ್ಲಿ ಬಿರುಕುಗಳು ಉಂಟಾಗಿ ಕಲ್ಲುಗಳು ಜಾರಿದ್ದು, ಹಂಚುಗಳು ಮತ್ತು ಶೀಟ್‌ಗಳು ತುಂಡಾಗಿವೆ. ಮನೆಯಲ್ಲಿದ್ದ ನೀರಿನ ಬ್ಯಾರೆಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಸಮಯದಲ್ಲಿ ಮನೆಯಲ್ಲಿದ್ದ ದಯಾನಂದ ಅವರ ಒಂದು ವರ್ಷದ ಮಗು, ತಾಯಿ ಲಕ್ಷ್ಮೀ, ಪತ್ನಿ ರಕ್ಷಿತಾ ಹಾಗೂ ದಯಾನಂದ ಸ್ವತಃ ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ ಕೆ, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಪುತ್ತಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮತ್ತು ಪೌರಾಯುಕ್ತ ವಿದ್ಯಾ ಎಮ್ ಕಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಅಸ್ವಸ್ಥರ ಆರೋಗ್ಯದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ.