ಪುತ್ತೂರು : ಅಶೋಕ ಜನಮನ ಕಾರ್ಯಕ್ರಮಕ್ಕೆ ಜನಸಾಗರ-ಸಂಜೆ ಸುರಿದ ಧಾರಾಕಾರ ಮಳೆ-ನೂಕು ನುಗ್ಗಲು-ಕೆಲವರು ಅಸ್ವಸ್ಥ-ಕೂಡಲೇ ಸಂಘಟಕರಿಂದ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ”ಅಶೋಕ ಜನಮನ -2025” ಎಂಬ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ, 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡ ಘಟನೆ ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.
ಈ ಮಧ್ಯೆ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿದ ಪರಿಣಾಮ ವಸ್ತ್ರ ಪಡೆದುಕೊಳ್ಳುವ ತರಾತುರಿಯಲ್ಲಿ ನೂಕುನುಗ್ಗಲು ಉಂಟಾಗಿ ಕೆಲವರು ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಘಟಕರು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸೇರಿಸಿ,ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಅಧಿಕ ಮಂದಿ ಭಾಗಿಯಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ. ಬಿಸಿಲಿನ ಧಗೆಗೆ ಜನರು ಕುಡಿಯಲು ನೀರೂ ಸಿಗದೇ ಪರದಾಟ ನಡೆಸಿದ್ದರು.
ಸಣ್ಣ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಜನರು ಕಾರ್ಯಕ್ರಮಕ್ಕೆ ಬಂದಿದ್ದು, ಕೆಸರು ತುಂಬಿದ್ದ ಮೈದಾನದಲ್ಲಿ ಅವ್ಯವಸ್ಥೆಯಾಗಿತ್ತು. ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರೀಕ್ಷೆಗಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿದ್ದು ಒಂದೆಡೆಯಾದ್ರೆ ಸಿಎಂ ಆಗಮನ ತುಸು ವಿಳಂಬವಾದುದರಿಂದ ವಸ್ತ್ರ ವಿತರಣೆ ಮತ್ತು ಅನ್ನದಾನವೂ ವಿಳಂಬವಾಗಿತ್ತು. ಸಂಜೆ ವೇಳೆ ಗುಡುಗು ಸಹಿತ ಧಾರಾಕಾರ ಮಳೆಯೂ ಸುರಿದ ಪರಿಣಾಮ ಕಾರ್ಯಕ್ರಮಕ್ಕೆ ಬಂದವರು ಮನೆ ಸೇರುವ ಧಾವಂತದಲ್ಲಿ ನೂಕುನುಗ್ಗಲು ಉಂಟಾಗಲು ಕಾರಣವಾಯಿತು.
ಶಾಸಕ ಅಶೋಕ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.
ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೊಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ, 3ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಜನ ಮಹಿಳೆಯರು ಈಗಾಗಲೇ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾಗಿಯಾಗಿದ್ದ ಯೋಗಿತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ(50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30) ಎಂಬವರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.