ನವದೆಹಲಿ: “ದೇವಸ್ಥಾನದ ಹಣ ದೇವರಿಗೆ ಸೇರಿದ್ದು. ಅದನ್ನು ದೇವಸ್ಥಾನದ ಹಿತಾಸಕ್ತಿಗಾಗಿಯೇ ಬಳಸಬೇಕೇ ಹೊರತು, ಆರ್ಥಿಕ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್‌ಗಳನ್ನು ಉಳಿಸಲು ಬಳಸುವಂತಿಲ್ಲ,” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದ ತಿರುನೆಲ್ಲಿ ದೇವಸ್ಥಾನದ ಆಡಳಿತ ಮಂಡಳಿ (ದೇವಸ್ವಂ) ಇಟ್ಟಿದ್ದ ಠೇವಣಿಯನ್ನು ಹಿಂದಿರುಗಿಸುವಂತೆ ಅಲ್ಲಿನ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಕೆಲವು ಸಹಕಾರಿ ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುವನ್ ಅವರಿದ್ದ ಪೀಠವು, ಬ್ಯಾಂಕ್‌ಗಳ ಅರ್ಜಿಯನ್ನು ವಜಾಗೊಳಿಸಿದೆ.
ವಿಚಾರಣೆ ವೇಳೆ ಬ್ಯಾಂಕ್‌ಗಳ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, “ನೀವು ಬ್ಯಾಂಕ್ ಅನ್ನು ಉಳಿಸಲು ದೇವರ ಹಣವನ್ನು ಬಳಸಲು ಬಯಸುತ್ತೀರಾ? ಮೊದಲನೆಯದಾಗಿ ದೇವಾಲಯದ ಹಣ ದೇವರಿಗೆ ಸೇರಿದ್ದು. ಅದನ್ನು ದೇವಾಲಯದ ಅಭಿವೃದ್ಧಿಗೆ ಮತ್ತು ರಕ್ಷಣೆಗೆ ಮಾತ್ರ ಬಳಸಬೇಕು. ಉಸಿರಾಡಲು ಕಷ್ಟಪಡುತ್ತಿರುವ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಇಡುವ ಬದಲು, ಗರಿಷ್ಠ ಬಡ್ಡಿ ನೀಡುವ ಹಾಗೂ ಸುಸ್ಥಿತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಡುವುದೇ ಸೂಕ್ತ. ಹೈಕೋರ್ಟ್ ಆದೇಶದಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿತು.
“ಬ್ಯಾಂಕ್‌ಗಳು ಜನರ ವಿಶ್ವಾಸವನ್ನು ಗಳಿಸಬೇಕು. ಗ್ರಾಹಕರನ್ನು ಮತ್ತು ಠೇವಣಿಗಳನ್ನು ಆಕರ್ಷಿಸಲು ನಿಮಗೆ ಸಾಧ್ಯವಾಗದಿದ್ದರೆ ಅದು ನಿಮ್ಮ ಸಮಸ್ಯೆ. ದೇವಸ್ಥಾನದ ಹಣವು ಸಹಕಾರಿ ಬ್ಯಾಂಕಿನ ಉಳಿವಿನ ಮೂಲವಾಗಲು ಸಾಧ್ಯವಿಲ್ಲ,” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಖಾರವಾಗಿ ನುಡಿದರು.
ತಿರುನೆಲ್ಲಿ ದೇವಸ್ವಂ ಮಂಡಳಿಯು ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿಂಗ್ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಟ್ಟಿತ್ತು. ಅವಧಿ ಮುಗಿದ ಬಳಿಕ ಪದೇ ಪದೇ ವಿನಂತಿಸಿದರೂ ಬ್ಯಾಂಕ್‌ಗಳು ಸ್ಥಿರ ಠೇವಣಿಗಳನ್ನು (Fixed Deposits) ಮರುಪಾವತಿಸಲು ನಿರಾಕರಿಸಿದ್ದವು. ಇದರಿಂದ ಬೇಸತ್ತ ದೇವಸ್ಥಾನ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್, ಎರಡು ತಿಂಗಳೊಳಗೆ ಹಣ ಹಿಂದಿರುಗಿಸುವಂತೆ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಹೈಕೋರ್ಟ್‌ನ ಈ ಆದೇಶದ ವಿರುದ್ಧ ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿದ್ದವು. ಇದೀಗ ಸುಪ್ರೀಂ ಕೋರ್ಟ್ ಕೂಡ ಬ್ಯಾಂಕ್‌ಗಳ ವಾದವನ್ನು ತಿರಸ್ಕರಿಸಿದೆ.























