ಪುತ್ತೂರು ನಗರದ ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯ ತುದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧ್ವಜಸ್ತಂಭಕ್ಕಾಗಿ ಶಾಸಕ ಅನುದಾನ ರೂ.25 ಲಕ್ಷ, ಪುಡಾ ರೂ.35 ಲಕ್ಷ ಹಾಗೂ ನಗರಸಭೆ ರೂ.40 ಲಕ್ಷ ಸೇರಿದಂತೆ ಒಟ್ಟು ರೂ.1 ಕೋಟಿಯ ಅನುದಾನ ಮೀಸಲಾಗಿದ್ದು ಕಾಮಗಾರಿಗೆ ಚಾಲನೆ ದೊರೆತಿದೆ.
ಶಿಲಾನ್ಯಾಸ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆಶೋಕ್ ರೈ ಮಾತನಾಡಿ, “ಪುತ್ತೂರಿನ ಇತಿಹಾಸದಲ್ಲಿ ಗುರುತು ಬೀರುವಂತಹ ಮಹತ್ ಕೆಲಸ ಇಂದು ಆರಂಭವಾಗಿದೆ. ತಾಲೂಕು ಮಟ್ಟದಲ್ಲಿ ಇಷ್ಟು ದೊಡ್ಡ ರಾಷ್ಟ್ರಧ್ವಜಸ್ತಂಭ ನಿರ್ಮಾಣವಾಗುತ್ತಿರುವುದು ಮೊದಲ ಬಾರಿಗೆ. ಇದು ದೇಶಭಕ್ತಿ ಉಕ್ಕುವಂತೆ ಚಿಹ್ನೆಯಾಗಲಿದೆ” ಎಂದು ಹೇಳಿದರು.
ತಾವು ನೀಡಿದ ಮಾಹಿತಿಯಲ್ಲಿ, 60×40 ಫೀಟ್ ಗಾತ್ರದ ಧ್ವಜವನ್ನು ಅಳವಡಿಸಲಾಗುವುದಿದ್ದು, ವರ್ಷಕ್ಕೆ ಮೂರು ಬಾರಿ ಧ್ವಜವನ್ನು ಬದಲಾಯಿಸಬೇಕಾಗುತ್ತದೆ. 80 ಮೀ (264 ಫೀಟ್) ಎತ್ತರದ ಧ್ವಜಸ್ತಂಭ, 1270 ಎಂ.ಎಂ. ತಳಪಾಯ, ವಿದ್ಯುತ್ ಚಾಲಿತ ಮೋಟಾರ್ ವ್ಯವಸ್ಥೆ, ಸಿಗ್ನಲ್ ಲೈಟ್ ಹಾಗೂ ಫೋಕಸ್ ಲೈಟ್ ವ್ಯವಸ್ಥೆಗಳನ್ನು ಒಳಗೊಂಡಿದೆ. ಗಣರಾಜ್ಯೋತ್ಸವಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಾಭಿವೃದ್ಧಿಗೆ ಪುಡಾ ಯೋಜನೆಗಳು ಪುಡಾದಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೆ ಉಳಿದಿದ್ದ ರೂ.8 ಕೋಟಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಯೋಜನೆ ರೂಪಿಸಲಾಗಿದೆ. ಬೊಳುವಾರಿನಲ್ಲಿ ಸರ್ಕಲ್, ದರ್ಬೆಯಲ್ಲಿ ಕ್ಲಾಕ್ ಟವರ್, ಅರುಣಾ ಚಿತ್ರಮಂದಿರ ಹಾಗೂ ಮಯೂರ ಚಿತ್ರಮಂದಿರದ ಸುತ್ತಮುತ್ತಿನ ವಿಸ್ತರಣೆ, 2.73 ಕೋಟಿಯಲ್ಲಿ ದೇವಾಲಯದ ಕೆರೆ ಅಭಿವೃದ್ಧಿ ಸೇರಿದಂತೆ ಅನೇಕ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತಿದೆ. ನಗರದಲ್ಲಿ ಡ್ರೈನೇಜ್ ವ್ಯವಸ್ಥೆ ಹಾಗೂ ಬೀರಮಲೆ ಅಭಿವೃದ್ಧಿ ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂದು ಶಾಸಕ ಆಶೋಕ್ ರೈ ಮಾಹಿತಿ ನೀಡಿದರು.
ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, “ಪುತ್ತೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಹಾರಾಡಬೇಕು — ಎಂಬುದು ಶಾಸಕರ ಕನಸಾಗಿತ್ತು. ಪುತ್ತೂರಿಗೆ ಹೆಮ್ಮೆ ತರುವ ಧ್ವಜಸ್ತಂಭ ಈಗ ವಾಸ್ತವವಾಗುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣಪ್ರಸಾದ್ ಆಳ್ವ, ಎಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ, ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಪಿ. ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯ ಮುಖಂಡರಾದ ಈಶ್ವರ ಭಟ್, ಡಾ. ರಾಜಾರಾಂ ಕೆ.ಬಿ., ಜಗದೀಶ್ ಶೆಟ್ಟಿ, ಜಯಂತಿ ಬಲ್ನಾಡು, ಜಗನ್ನಾಥ ರೈ, ಪ್ರಸಾದ್ ಕೌಶಲ್ ಶೆಟ್ಟಿ, ವಲೇರಿಯನ್ ಡಯಾಸ್, ಝೇವಿಯರ್ ಡಿಸೋಜ, ವಾಸುದೇವ ಆಚಾರ್ಯ, ನಳಿನಿ ಪಿ. ಶೆಟ್ಟಿ ಹಾಗೂ ಅನೇಕರು ಈ ಸಂದರ್ಭದಲ್ಲಿ ಭಾಗವಹಿಸಿದರು.
ರಾಜ್ಯದ ಟಾಪ್–3 ಎತ್ತರದ ಧ್ವಜಸ್ತಂಭಗಳು
- ಬೆಳಗಾವಿ — ಅತೀ ಎತ್ತರದ ರಾಷ್ಟ್ರಧ್ವಜ
- ಹಂಪಿ ವಿಜಯನಗರ — ಎರಡನೇ ಅತೀ ಎತ್ತರ
- ಪುತ್ತೂರು ನೆಲ್ಲಿಕಟ್ಟೆ — ಮೂರನೇ ಸ್ಥಾನ
(4ನೇ ಸ್ಥಾನ: ಮಂಗಳೂರು)























