ಬಂಟ್ವಾಳ : ಅತೀ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಇಲಾಖೆ ಹಲವು ರೀತಿಯಲ್ಲಿ ಶ್ರಮಿಸುತ್ತಿದೆ, ಹೀಗಿದ್ದರೂ ಕುಕ್ಕುಟ ಕ್ಷೇತ್ರದಲ್ಲಿ ಕಂಡ ಸ್ವಾವಲಂಬನೆ ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧ್ಯವಾಗಿಲ್ಲ, ಈ ಕುರಿತು ಹೆಚ್ಚಿನ ಜಾಗೃತಿಯಾಗಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ ಜಿಲ್ಲೆ ಪಶುವೈದ್ಯ ಆಸ್ಪತ್ರೆ ಬಂಟ್ವಾಳ , ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರುಇವರ ನೇತೃತ್ವದಲ್ಲಿ ನೇರಳಕಟ್ಟೆಯ ಗಣೇಶ ಸಭಾ ಭವನದಲ್ಲಿ ನಡೆದ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಮಾಹಿತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹೈನುಗಾರಿಕೆಗೆ ಪೂರಕ ತರಬೇತಿ, ಪರಿಕರ ವಿತರಣೆ, ಮಾಹಿತಿ ಶಿಬಿರ ಸಹಿತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಪ್ರತಿ ದಿನ 5.65ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಪೂರೈಕೆಯಾಗುತ್ತಿರುವುದು ಸುಮಾರು 4.25 ಲಕ್ಷ ಲೀಟರ್ ಹಾಲು ಮಾತ್ರ. ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳನ್ನು ಆಶ್ರಯಿಸಬೇಕಾಗಿದೆ. ಜಿಲ್ಲೆಯ ಯುವ ಜನತೆ ಹೈನುಗಾರಿಕೆಯತ್ತ ಮುಖಮಾಡಿದರೆ ಪರಿವರ್ತನೆ ಸಾಧ್ಯವಿದೆ ಎಂದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಅಭಿವೃದ್ಧಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಷ್ಠಾನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ, ಬ್ಯಾಂಕ್ ಮೂಲಕ ಹಲವು ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಬೆಳ್ತಂಗಡಿಯ ಮುಖ್ಯಪಶುವೈದ್ಯಾಧಿಕಾರಿ ಡಾ.ರವಿಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ತಮ್ಮ ಕಾರ್ಯವೈಖರಿಯಲ್ಲಿ ದೂರದೃಷ್ಟಿಯ ಕೊರತೆಯಿಂದ ಆಧುನಿಕ ಹೈನುಗಾರರು ಸೋಲು ಅನುಭವಿಸುತ್ತಿದ್ದಾರೆ. ಈ ಕುರಿತು ಹೈನುಗಾರರು ಪುನರ್ ವಿಮರ್ಶೆ ಮಾಡಿಕೊಂಡು ಬುದ್ಧಿವಂತಿಕೆಯ ಹೆಜ್ಜೆ ಇಡಬೇಕಿದೆ ಎಂದರು.
ನೆಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸುಧಾಕರ ರೈ ಬೋಳಂತೂರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಗೌಡ, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಾದ ಸುರೇಶ್ ರೈ, ಪುಷ್ಪಲತಾ ಎಸ್.ಪಿ, ಸಿ.ಹೆಚ್. ನಾರಾಯಣ ಭಟ್, ಅಮಿತ್ ಜೈನ್, ವೇದಾವತಿ, ರಾಘವ ಗೌಡ, ನವೀನ್ ಕುಮಾರ್, ರಾಘವೇಂದ್ರ ಭಟ್, ಗಣೇಶ್ ನಾಯ್ಕ್, ಗಣೇಶೋತ್ಸವ ಸಮಿತಿ ಪ್ರಮುಖರಾದ ಬೇಬಿ ನಾಯ್ಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೇರಳಕಟ್ಟೆ, ಮಾಣಿ, ಕಡೇಶಿವಾಲಯ, ಪೇರಮೊಗರು, ಕೆದಿಲ, ಬುಡೋಳಿ, ಬಂಟ್ರಿಂಜ, ಅನಂತಾಡಿ, ಬರಿಮಾರು, ಏಮಾಜೆ, ಪೆರ್ನೆ, ಬಿಳಿಯೂರು ಹಾಲು ಉತ್ಪಾದಕರ ಸಹಕಾರ ಸಂಘಗಳು, ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘ, ಕಡೇಶ್ವಾಲ್ಯ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆದಿಲ ಇವುಗಳ ಸಹಬಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಹುಮಾನಿತ ಗೋವುಗಳನ್ನು ಮೆರವಣಿಗೆಯಲ್ಲಿ ಕರೆತಂದು ಗೋಪೂಜೆ ನಡೆಸಲಾಯಿತು. ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಮೀಳಾ ತಾಳಿಪಡ್ಪು ಅನಂತಾಡಿ(ಪ್ರಥಮ)
ಪಾರ್ವತಿ ಬಳ್ಳಮಜಲು ಪೆರಾಜೆ (ದ್ವಿತೀಯ), ಗಿರಿಜ ನೆಕ್ಕಿಲಾಡಿ, ಕಡೇಶಿವಾಲಯ(ತೃತೀಯ), ಕೇಶವತಿ ಎಂ.ರಾವ್ ಯಾದವಗಿರಿ ಕಡೇಶಿವಾಲಯ(ಪ್ರೋತ್ಸಾಹಕ) ಬಹುಮಾನ ಪಡೆದುಕೊಂಡರು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.


























