ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಜ.24 ರಂದು ತನ್ನ 33ನೇ ಸಂಭ್ರಮದೊಂದಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಕೆ ಎಸ್ ಅವರ ಗೌರವ ಸಂಚಾಲಕತ್ವದಲ್ಲಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿರವರ ಗೌರವ ಉಪಸ್ಥಿತಿಯಲ್ಲಿ ಇತಿಹಾಸ ಪ್ರಸಿದ್ಧ ತುಳುನಾಡ ಜಾನಪದ ಕ್ರೀಡೆಗಳಲ್ಲೊಂದಾದ ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ. ಕಂಬಳ ಕ್ಷೇತ್ರಕ್ಕೆ ಹಲವು ಪ್ರಥಮಗಳನ್ನು ಪುತ್ತೂರಿನಿಂದ ಆರಂಭಿಸುತ್ತಿದ್ದಂತೆ ಕಳೆದ ಬಾರಿ ಕಂಬಳದ ಕರೆಯಲ್ಲಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ ನಡೆದಿತ್ತು. ಈ ಬಾರಿ ಕಂಬಳದ ಕರೆಯಲ್ಲಿ ರಿಲೇಯೂ ನಡೆಯಲಿದೆ. ಜೊತೆಗೆ ಕಂಬಳದಲ್ಲಿ ಭಾಗವಹಿಸಿದ ಎಲ್ಲಾ ಕಂಬಳದ ಕೋಣಗಳಿಗೆ ಪದಕ ನೀಡಿ ಗೌರವಿಸಲಾಗುವುದು ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕೀರ್ತಿಶೇಷ ಜಯಂತ ರೈ ಅಂದಿನ ಶಾಸಕಕರಾಗಿದ್ದ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವು 33ನೇ ವರ್ಷದಲ್ಲಿದೆ. ಇವತ್ತು ದೇಶವಿದೇಶದಲ್ಲಿ ಕಂಬಳ ಜನಜನಿತವಾಗಿದೆ ಎಂದ ಅವರು ಈ ವರ್ಷ ಸುಮಾರು 175 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ.
ನಮ್ಮ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಕೂಡಾ ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ. ಇದರ ಜೊತೆಗೆ ಸರಕಾರದಿಂದ ಪ್ರೋತ್ಸಾಹಕವಾಗಿ ರೂ. 5ಲಕ್ಷ ಲಭಿಸಿದೆ ಎಂದ ಅವರು ಕಂಬಳದ ಉದ್ಘಾಟನೆಯನ್ನು ಶ್ರೀಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ನಮ್ಮ ಸಮಿತಿಯ ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ ಸಭಾ ಕಾರ್ಯಕ್ರಮ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್, ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಬೆಂಗಳೂರು ಎಂ.ಆರ್.ಜಿ ಗ್ರೂಪ್ಸ್‌ನ ಚೇರ್‌ಮೆನ್ ಪ್ರಕಾಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಗಣೇಶ್ ಬೀಡಿ ಮಾಲಕ ಜಗನ್ನಾಥ ಶೆಣೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚವಿ ಅಭಯಚಂದ್ರ ಜೈನ್, ಅಖಿಲ ಭಾರತ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ ಸಹಿತ ಮತ್ತಿರರ ಗಣ್ಯರು ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆಯ ಸಮಾರಂಭದ ಬಳಿಕ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದವರು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ನಡೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ನರೇಂದ್ರ ರೈ ದೇರ್ಲ, ಕಂಬಳ ಕ್ಷೇತ್ರದಲ್ಲಿ ಪದ್ಮನಾಭ ಶೆಟ್ಟಿ ರೆಂಜಾಜಿಗುತ್ತು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಚಂದ್ರಶೇಖರ ಕೆ.ಎಸ್, ಕೃಷಿ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ್ ಪೆರ್ನಾಜೆ, ಸಾಮಾಜಿಕ ಕ್ಷೇತ್ರದಲ್ಲಿ ಅಬೂಬಕ್ಕರ್ ಮುಲಾರ್, ಕಲಾ ಕ್ಷೇತ್ರದಲ್ಲಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುದರ್ಶನ್ ನಾಯ್ಕ್ ಕಂಪ ಅವರನ್ನು ಸನ್ಮಾನಿಸಲಾಗುವುದು ಎಂದು ಚಂದ್ರಹಾಸ ಶೆಟ್ಟಿಯವರು ತಿಳಿಸಿದರು.
ಸಮಾರೋಪ ಸಮಾರಂಭವು ಜ.25 ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅಧ್ಯಕ್ಷತೆ ವಹಿಸಲಿದ್ದು, ಪುತ್ತೂರಿನಲ್ಲಿ ಡಿವೈಎಸ್ಪಿ ಆಗಿದ್ದ ಅರುಣ್ ನಾಗೇ ಗೌಡ, ಪುತ್ತಿಲ ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಹಾಲಿ ಸದಸ್ಯರು ಸಹಿತ ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಲಿದ್ದಾರೆ ಎಂದು ಎನ್ ಚಂದ್ರಹಾಸ ಶೆಟ್ಟಿ ಹೇಳಿದರು.
ಅನೇಕ ಗಣ್ಯಾತಿಗಣ್ಯರು, ಖ್ಯಾತ ಚಲನ ಚಿತ್ರ ನಟ-ನಟಿಯರು ವಿಶೇಷ ಆಕರ್ಷಣೆಯಲ್ಲಿರುತ್ತಾರೆ. ಎಲ್ಲರಲ್ಲೂ ಕುತೂಹಲ ಮೂಡಲೆಂಬ ನಿಟ್ಟಿನಲ್ಲಿ ಯಾರು ಬರುತ್ತಾರೆಂದು ಈಗ ಹೇಳುವುದಿಲ್ಲ. ಆದರೂ ಈಗಾಗಲೇ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯವರು ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ. ಇದರ ಜೊತೆಗೆ ಇನ್ನೂ ಹಲವಾರು ಮಂದಿ ಆಗಮಿಸಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷರೂ ಮತ್ತು ತೀರ್ಪುಗಾರರಾಗಿರುವ ನಿರಂಜನ ರೈ ಮಠಂತಬೆಟ್ಟು, ಉಪಾಧ್ಯಕ್ಷ ರೋಷನ್ ರೈ ಬನ್ನೂರು, ಸದಸ್ಯ ಶಿವಪ್ರಸಾದ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
ಅನೇಕ ಗಣ್ಯಾತಿಗಣ್ಯರು, ಖ್ಯಾತ ಚಲನ ಚಿತ್ರ ನಟ-ನಟಿಯರು ವಿಶೇಷ ಆಕರ್ಷಣೆಯಲ್ಲಿರುತ್ತಾರೆ. ಎಲ್ಲರಲ್ಲೂ ಕುತೂಹಲ ಮೂಡಲೆಂಬ ನಿಟ್ಟಿನಲ್ಲಿ ಯಾರು ಬರುತ್ತಾರೆಂದು ಈಗ ಹೇಳುವುದಿಲ್ಲ. ಆದರೂ ಈಗಾಗಲೇ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯವರು ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ. ಇದರ ಜೊತೆಗೆ ಇನ್ನೂ ಹಲವಾರು ಮಂದಿ ಆಗಮಿಸಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.
ಕಂಬಳ ಕೋಣಗಳ ಜತೆಗೆ ಓಡುವ ಓಟಗಾರರ ನೈಪುಣ್ಯತೆ ಹೆಚ್ಚಿಸಲು ಕಳೆದ ಬಾರಿ ಕೆಸರುಗದ್ದೆ ಓಟವನ್ನು ಆಯೋಜಿಸಲಾಗಿತ್ತು. ಅದು ಬಹಳ ಯಶಸ್ವಿಯಾಗಿ ನಡೆದಿದೆ. ಕೇವಲ 16 ನಿಮಿಷಿದಲ್ಲಿ ವಿಜೆತರಿಗೆ ಬಹುಮಾನವನ್ನೂ ವಿತರಿಸಿ ಕಂಬಳಕ್ಕೆ ಎಲ್ಲೂ ತೊಂದರೆ ಆಗದಂತೆ ಕಾರ್ಯಕ್ರಮ ಜೋಡಿಸಲಾಗಿತ್ತು. ಈ ಬಾರಿ ರಿಲೇಯನ್ನು ಸೇರಿಸಿದ್ದೇವೆ. 8 ತಂಡಗಳು ರಿಲೇಯಲ್ಲಿ ಭಾಗವಹಿಸಲಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಪ್ರದೀಪ್ ಡಿಸೋಜ, ಸುಧಾಕರ್ ನಾಯ್ಕ್ ಕಂಪ, ಬಾಲಕೃಷ್ಣ ರೈ ಪೊರ್ದಾಲ್ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ದಕ್ಷಿಣ ಕನ್ನಡ ಇಲಾಖೆಯ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯ ಜಂಟಿ ನಿರ್ದೇಶಕರು ಬಹುಮಾನ ವಿತರಿಸಲಿದ್ದಾರೆ. ಈ ಸಂದರ್ಭ ಚಿತ್ರ ನಟ ಸುಂದರ ರೈ ಮಂದಾರ ಸಹಿತ ಹಲವಾರು ಮಂದಿ ಭಾಗವಹಿಸಲಿದ್ದಾರೆ. ಕೆಸರು ಗದ್ದೆ ಓಟ ಮಧ್ಯಾಹ್ನ ಗಂಟೆ 12ಕ್ಕೆ ಆರಂಭಗೊಂಡು ಸಂಜೆ ಸಭಾ ಕಾರ್ಯಕ್ರಮದ ಮುಂದೆ ಫೈನಲ್ ನಡೆಯುತ್ತದೆ.
ಕಂಬಳಕ್ಕೆ ಆರು ವಿಭಾಗಗಳ ಕೋಣಗಳ ಭಾಗವಹಿಸಿದ್ದು, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು, ಹಿರಿಯ ವಿಭಾದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ, ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನದ ಬಹುಮಾನ. ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಯಜಮಾನರುಗಳಿಗೆ ಚಿನ್ನದೊಂದಿಗೆ ಕೋಟಿ ಚೆನ್ನಯ ಟ್ರೋಪಿ ನೀಡಿ ಗೌರವಿಸಲಾಗುವುದು. ಈ ಭಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕೋಣಗಳಿಗೂ ಪದಕ ನೀಡಲಾಗುವುದು ಎಂದು ಎನ್.ಚಂದ್ರಹಾಸ ಶೆಟ್ಟಿ ಹೇಳಿದರು.


























