ಪುತ್ತೂರು: ಮುಖ್ಯ ರಸ್ತೆಯ ಮಹಿಳಾ ಠಾಣಾ ಮುಂಭಾಗದಲ್ಲಿ ಅರ್ಧ ಭಾಗ ತೆರವುಗೊಳಿಸಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಶತಮಾನದ ಹಳೆಯ ಕಟ್ಟಡವನ್ನು ಜೂ.12ರಂದು ತೆರವುಗೊಳಿಸಲಾಗಿದೆ.
ಮಹಿಳಾ ಠಾಣಾ ಮುಂಭಾಗದಲ್ಲಿರುವ ಹಳೆಯ ಕಟ್ಟಡವನ್ನು ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಆಗಮಿಸುವ ವೇಳೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡದ ಆರ್ಧ ಭಾಗವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿತ್ತು.
ಜಾತ್ರೆ ವೇಳೆ ಉಳ್ಳಾಲ್ತಿ ಕಟ್ಟೆಯ ಬಳಿ ಗರೀಷ್ಠ ಸಂಖ್ಯೆಯಲ್ಲಿ ಭಕ್ತರ ಸೇರುತ್ತಿದ್ದು ಭಕ್ತರ ಅನುಕೂಲಕ್ಕಾಗಿ ಒಂದು ಭಾಗವನ್ನು ತೆರವುಗೊಳಿಸಲಾಗಿತ್ತು. ಉಳಿದ ಭಾಗವನ್ನು ಹಾಗೆಯೇ ಬಿಡಲಾಗಿತ್ತು.
ಕೆಲ ದಿನಗಳಿಂದ ಮಳೆ ಪ್ರಾರಂಭವಾಗಿದ್ದು ಕಟ್ಟಡವು ಮಳೆಗೆ ಕುಸಿಯಲಾರಂಬಿಸಿತ್ತು. ಕೆಲ ದಿನಗಳ ಹಿಂದೆ ಸಂಜೆ ವೇಳೆ ಕಟ್ಟಡದ ಕಲ್ಲುಗಳು ಜರಿದು ಬಿದ್ದಿರುವುದರಿಂದ ಸಾರ್ವಜನಿಕರಲ್ಲಿ ಭೀತಿಯನ್ನು ಉಂಟುಮಾಡಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಕಟ್ಟಡದ ಬಳಿ ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರಿಗೆ ಸುರಕ್ಷತೆಯ ಅರಿವು ಮೂಡಿಸಲು ಬ್ಯಾನರ್ ಅಳವಡಿಸಲಾಗಿತ್ತು. ಇದೀಗ ಈ ಕಟ್ಟಡವನ್ನು ಕಟ್ಟಡದ ಮಾಲಕರು, ಪೊಲೀಸರು, ನಗರ ಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮಗೊಳಿಸಲಾಗಿದೆ.

























