ಖ್ಯಾತ ನಟ ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಸಭೆಯಲ್ಲಿ ಸಚಿವರು, ಅಧಿಕಾರಿಗಳ ಜೊತೆಗೆ ರಿಷಬ್ ಶೆಟ್ಟಿ ಕೂಡಾ ಭಾಗಿಯಾಗಿದ್ದರು.
ಸಿಎಂ ಡಿಕೆ ಶಿವಕುಮಾರ್ ಅವರು ಹಲವು ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಕರಾವಳಿಯಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ತೀರ್ಮಾನ ಮಾಡಲಾಗಿದೆ. ಇದೇ ವೇಳೆ ಕೆಲವೊಂದು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಸಭೆಯಲ್ಲಿ ಸಿಆರ್ಝಡ್ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ 15- 20 ದಿನಗಳಲ್ಲಿ ವರದಿ ಸಿದ್ದಪಡಿಸಿ. ಸಮಸ್ಯೆಗಳು ಮತ್ತು ಪರಿಹಾರಗಳನ್ನು ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಅವರು ತಾಕೀತು ಮಾಡಿದ್ದಾರೆ.
ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು: ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಡಿಕೆಶಿ ಸೂಚನೆ ನೀಡಿದ್ದಾರೆ. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿ/ ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4,500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಸೂಚಿಸಿದ್ದಾರೆ. ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸಲು ಸೂಚನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಮಡಿದ್ದರು. ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು: ಕರಾವಳಿಯ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲ ಆಗುತ್ತಿದೆ ಎಂದು ಗಮನ ಸೆಳೆದಿದ್ದರು.
ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರನ್ನು ಕರಾವಳಿ ಪ್ರವಾಸೋದ್ಯಮ ರಾಯಬಾರಿಯನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಪರ -ವಿರೋಧ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿ ಭಾಗದ ಪ್ರಗತಿಪರರು ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಬಲ ಪಂಥೀಯ ಒಲವು ಇರುವ ನಟ ಎಂದು ಅವರು ದೂರಿದ್ದಾರೆ. ಹಾಗಾಗಿ ರಾಯಬಾರಿಯನ್ನಾಗಿ ಮಾಡಬಾರದು ಸರಿಯಲ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ‘ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಗಳು ನಡೆಸಿದ ಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ಚಿತ್ರನಟ, ಸಿನೆಮಾ ಉದ್ಯಮಿ ರಿಷಭ್ ಶೆಟ್ಟರ ಹಾಜರಾತಿ ಸಹಜವಾಗಿ ಪ್ರಶ್ನೆಗಳನ್ನು ಎತ್ತುತ್ತದೆ. ಉನ್ನತ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಹೊರತಾಗಿ ಅಲ್ಲಿ ಹಾಜರಿರುವುದು ರಿಷಭ್ ಶೆಟ್ಟಿ ಮಾತ್ರ. ಮುಖ್ಯಮಂತ್ರಿ ಗಳು ಅವರೊಬ್ಬರನ್ನು ಮಾತ್ರ ಆಹ್ವಾನಿಸಿರುವುದು ಯಾತಕ್ಕೆ ? “ನೋ ಕಮೆಂಟ್ಸ್” ಶೆಟ್ರಿಗೆ ಮುಖ್ಯಮಂತ್ರಿ ಗಳಿಂದ ಅಷ್ಟೊಂದು ಆದ್ಯತೆಗೆ ಕಾರಣಗಳು ಏನು ?’ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶಶಿಧರ್ ಹೆಮ್ಮಾಡಿ ಅವರು ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ರಿಷಬ್ ಶೆಟ್ಟಿಯನ್ನು ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾವಳಿಯ ಪ್ರವಾಸೋದ್ಯಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಇದು ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರಕ್ಕೂ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಇರುವ ಸೈದ್ಧಾಂತಿಕ ಭಿನ್ನತೆ. ನನ್ನ ಕರಾವಳಿಗೆ ಈತ ಪ್ರವಾಸೋದ್ಯಮದ ರಾಯಭಾರಿ. ಇದು ಕಾಂಗ್ರೆಸ್ ಸರ್ಕಾರದ ಭಾರೀ ದುರಂತ’ ಎಂದಿದ್ದಾರೆ.
ಈ ಕುರಿತಾಗಿ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಪ್ರತಿಕ್ರಿಯೆ ನೀಡಿ, ರಿಷಬ್ ಶೆಟ್ಟಿ ಕರಾವಳಿಯ ಪ್ರವಾಸೋದ್ಯಮ ರಾಯಭಾರಿಗೆ ಸೂಕ್ತ ವ್ಯಕ್ತಿ. ಅಲ್ಲಿಯ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿದ ವ್ಯಕ್ತಿ. ತಮ್ಮ ಸಿನಿಮಾಗಳ ಮೂಲಕ ಕರಾವಳಿಯ ಸಂಸ್ಕೃತಿಯನ್ನು ದೇಶ, ಪ್ರಪಂಚಕ್ಕೆ ಪಸರಿಸಿದವರು. ಈ ನಿಟ್ಟಿನಲ್ಲಿ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರನ್ನು ರಾಯಬಾರಿಯನ್ನಾಗಿ ನೇಮಿಸುವ ಸರ್ಕಾರದ ಚಿಂತನೆ ಸ್ವಾಗತಾರ್ಹ’ ಎಂದರು.
























