ಮಂಗಳೂರು: ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ಹೆದ್ದಾರಿಯಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಂದ ಸಿನೀಮಿಯ ರೀತಿಯಲ್ಲಿ ದರೋಡೆ ಮಾಡಲಾಗಿದೆ. ವಿಕಾಸ್ ಎಂಬ ಹೆಸರಿನ ಚಿನ್ನದ ವ್ಯಾಪಾರಿ ಮಹಾರಾಷ್ಟ್ರದಿಂದ ಮದುವೆ ಮುಗಿಸಿ ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆಯ ಸುಮಾರಿಗೆ, ಸುರತ್ಕಲ್‌ನ ಬೈಕಂಪಾಡಿ ಹೆದ್ದಾರಿಯಲ್ಲಿ ಖದೀಮರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಖದೀಮರು ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನು ಬೆದರಿಸಿ ಕಾರಿನಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ದರೋಡೆಕೋರರು ಚಿನ್ನದೊಂದಿಗೆ ವಿಕಾಸ್ ಅವರ ಕಾರನ್ನೂ ಅಪಹರಿಸಿಕೊಂಡು ಹೋಗಿದ್ದಾರೆ. ಉಡುಪಿ-ಮಂಗಳೂರು ಸಂಪರ್ಕಿಸುವಂತಹ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯು ನಿರಂತರ ವಾಹನ ಸಂಚಾರದಿಂದ ಕೂಡಿದ್ದು, ಇಂತಹ ಘಟನೆ ನಡೆದಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ವೇಳೆ, ಬೈಕಂಪಾಡಿ ದ್ವಾರದ ಬಳಿ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅವರ ಕಾರನ್ನು ಅಡ್ಡಗಟ್ಟಿತು. ಬಳಿಕ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಲಾಯಿತು. ನಂತರ ದರೋಡೆಕೋರರೊಬ್ಬನೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಆ ವೇಳೆ ಕಾರಿನಲ್ಲಿದ್ದ ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನೂ ಬೆದರಿಸಿ ಕಾರಿನಲ್ಲೇ ಕರೆದೊಯ್ಯಲಾಗಿದೆ.
ನಂತರ ಕುಳೂರು ಸಮೀಪ ಇಬ್ಬರನ್ನೂ ಕಾರಿನಿಂದ ಇಳಿಸಿ, ಕಾರಿನಲ್ಲಿದ್ದ ಚಿನ್ನ ಮತ್ತು ನಗದಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ದೋಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ದರೋಡೆ ಪ್ರಕರಣದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ದುಷ್ಕರ್ಮಿಗಳು ಬಂದ ಎರಡು ಇನ್ನೋವಾ, ಒಂದು ಸ್ವಿಫ್ಟ್ ಕಾರು ಹಾಗೂ ವಿಕಾಸ್ ಅವರ ಕಾರಿನ ಚಲನವಲನ ದೃಶ್ಯಗಳಲ್ಲಿ ದಾಖಲಾಗಿದೆ. ಸಿಸಿಟಿವಿಯಲ್ಲಿ ಮೊದಲು ಇನ್ನೋವಾ ಕಾರು ವಿಕಾಸ್ ಅವರ ಕಾರಿನ ಮುಂದೆ ಬಂದು ಅಡ್ಡಗಟ್ಟಿರುವುದು ಕಾಣಿಸಿದೆ. ನಂತರ ವಿಕಾಸ್ ಅವರನ್ನು ಕೆಳಗಿಳಿಸಿ, ಅವರ ಕಾರನ್ನು ದುಷ್ಕರ್ಮಿಯೇ ಚಲಾಯಿಸಿಕೊಂಡು ಹೋಗಿರುವ ದೃಶ್ಯವೂ ಸೆರೆಯಾಗಿದೆ.
ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದರೋಡೆಕೋರರು ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರುಗಳಲ್ಲಿ ಬಂದಿದ್ದರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈ ಕೃತ್ಯದ ಹಿಂದೆ ಚಿನ್ನದ ವ್ಯಾಪಾರಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಹೊಂದಿರುವವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.























