ಪುತ್ತೂರು: ಫೋಟೋಗ್ರಾಫರ್ ಅಸೋಸಿಯೇಷನ್‌ನ ಸದಸ್ಯರಿಗಾಗಿ ಛಾಯಾ ಸಾಂತ್ವನ ಎಂಬ ಹೊಸ ವಿಮಾ ಯೋಜನೆಯನ್ನು ಜಿಲ್ಲಾ ಸಂಘದ ಮೂಲಕ ಜಾರಿಗೊಳಿಸಲಾಗುವುದು ಎಂದು ಫೋಟೋಗ್ರಾಫರ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಹೇಳಿದರು.
ರೋಟರಿ ಮನೀಷಾ ಸಭಾಂಗಣದಲ್ಲಿ ಜು.18ರಂದು ನಡೆದ ಫೋಟೋಗ್ರಾಫರ್ ಅಸೋಸಿಯೇಷನ್‌ನ ಪುತ್ತೂರು ವಲಯದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿಯಲ್ಲಿ ಸಾಕಷ್ಟು ಸವಾಲುಗಳ ಮಧ್ಯೆ ಫೋಟೋಗ್ರಾಫರ್ ಗಳು ಜೀವನ ನಡೆಸಬೇಕಾದ ಅನಿವಾರ್ಯತೆಯಿದೆ. ಕೆಲವರು ಆರ್ಥಿಕವಾಗಿಯೂ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮನೆಯ ಆಧಾರ ಸ್ಥಂಬವಾಗಿದ್ದವರನ್ನು ಆಕಸ್ಮಿಕವಾಗಿ ಕಳೆದುಕೊಂಡು ಸಂಕಷ್ಟಗಳನ್ನು ಎದುರಿಸುತ್ತಿರುವ ಸಂಘದ ಸದಸ್ಯರ ಮನೆಯವರಿಗೆ ನೆರವಾಗುವ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಛಾಯಾ ಸಾಂತ್ವನ ವಿಮಾ ಯೋಜನೆಯನ್ನು ಮಾಡುವ ಉದ್ದೇಶವಿದ್ದು ಈ ಯೋಜನೆಯ ಮೂಲಕ ಆಕಸ್ಮಿಕವಾಗಿ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ರೂ.2.50ಲಕ್ಷದಿಂದ .5ಲಕ್ಷ ತನಕ ವಿಮಾ ಮೊತ್ತ ನೀಡುವ ಯೋಜನೆರೂಯಿದೆ. ಜಿಲ್ಲಾ ಸಂಘದ ಮಹಾಸಭೆಯಲ್ಲಿ ಅನುಮೋದನೆ ಪಡೆದು ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಕುರಿತು ಸಂಘದ ಕಾರ್ಯಾಗಾರ ನಡೆಸಲಾಗುತ್ತಿದ್ದು ಇದರಲ್ಲಿ ಭಾಗವಹಿಸಿ ತಮ್ಮ ವೃತ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು. ಸಂಘದ ಮೂಲಕ ಸದಸ್ಯರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದ ಅವರು ಸದಸ್ಯರೂ ಸಂಘದ ಜೊತೆ ಸಹಕರಿಸಬೇಕು. ಸಂಘಟನೆಗಾಗಿ ಪದಾಧಿಕಾರಿಗಳಿಗೆ ಯಾವುದೇ ಶುಲ್ಕ ನೀಡುವುದಿಲ್ಲ. ಅವರು ತಮ್ಮ ಸಮಯ, ಹಣ ವ್ಯಯ ಮಾಡುತ್ತಿದ್ದಾರೆ. ಹೀಗಾಗಿ ಸದಸ್ಯರೂ ತಮ್ಮ ಸಂಘಟನೆಗಾಗಿ ಸಮಯ ನೀಡಬೇಕು. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಹಕರಿಸಬೇಕು ಎಂದು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಲಯದ ಅಧ್ಯಕ್ಷ ಜಯಂತ ಗೌಡ ಕರ್ಕುಂಜ ಮಾತನಾಡಿ, ನಮ್ಮ ಅಸ್ಥಿತ್ವ ಉಳಿಯಬೇಕಾದರೆ ನಮಗೆ ಸಂಘಟನೆ ಅವಶ್ಯಕ. ಸಂಘಟನೆಯ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸುವ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಮಂಗಳೂರು, ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ಎಸ್‌ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ ರಾವ್ ಮಾತನಾಡಿ, ಸಂಘಟನೆಯ ಮಹತ್ವ ಹಾಗೂ ಸಂಘದ ಬೆಳವಣಿಗೆಯಲ್ಲಿ ಸದಸ್ಯ ಸಹಕಾರವನ್ನು ವಿವರಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಾಧಕ ರವಿ ಉಪ್ಪಿನಂಗಡಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್ಸಿ,ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹೊಸ ಸ್ಟುಡಿಯೋ, ಮನೆ ನಿರ್ಮಾಣ, ನವ ವಿವಾಹಿತರಾದ ವಲಯದ ಸದಸ್ಯರನ್ನು ಸಭೆಯಲ್ಲಿ ಗುರುತಿಸಲಾಯಿತು.
ಜಗದೀಶ್ ಶೆಟ್ಟಿ ಸೂತ್ರಬೆಟ್ಟು ಪ್ರಾರ್ಥಿಸಿದರು. ಗೌರವವಾಧ್ಯಕ್ಷ ರಘು ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಣೆಗೈದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಟ್ಟಪುಣಿ ವರದಿ ವಾಚಿಸಿದರು. ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಉಪ್ಪಿನಂಗಡಿ ಲೆಕ್ಕಪತ್ರ ಮಂಡಿಸಿದರು. ಪ್ರಮೋದ್ ಕಾರ್ಯಕ್ರಮ ನಿರೂಪಿಸಿ,ಗಣೇಶ್ ಕಟ್ಟಪುಣಿ ವಂದಿಸಿದರು.ಗುಣಕರ ಪೂಜಾರಿ ಏಕ, ಸುಶ್ರೂತ್ ರೈ, ಸುಭಾಷ್ ರವಿ, ಸುಧೀರ್, ಗಿರಿಧರ್ ಭಟ್, ರಾಜೇಶ್ ರಾಮಕುಂಜ, ವಸಂತ, ಪ್ರವೀಣ್ ವಿಟ್ಲ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.
























