ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಆಯ್ಕೆಯಾಗಿದ್ದಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೈದ್ಧಾಂತಿಕ ಪ್ರೇರಣೆ ಹಾಗೂ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ. ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ವಿದ್ಯಾಭಾರತಿಯ ಶೈಕ್ಷಣಿಕ ಧ್ಯೇಯಗಳು ಹಾಗೂ ವಿಚಾರಧಾರೆಗಳಿಗೆ ಪೂರಕವಾಗಿ ಸಂಘ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದೆ.
ಪ್ರಸ್ತುತ ಸಂಘದ ಆಡಳಿತದಲ್ಲಿ 85ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಶಿಶುಮಂದಿರ, ಶಾಲೆಗಳಿಂದ ಪದವಿ, ಸ್ನಾತಕೋತ್ತರ, ತಾಂತ್ರಿಕ, ವೃತ್ತಿಪರ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳವರೆಗೆ ವ್ಯಾಪಕ ಶೈಕ್ಷಣಿಕ ಜಾಲವನ್ನು ಹೊಂದಿದೆ. 28ಕ್ಕೂ ಹೆಚ್ಚು ಕ್ಯಾಂಪಸ್‌ಗಳಲ್ಲಿ 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 1,400ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದ ಅಧ್ಯಕ್ಷ ಸ್ಥಾನವನ್ನು ಈ ಹಿಂದೆ ಮಾಜಿ ಶಾಸಕ ರಾಮ್ ಭಟ್, ಸಹಕಾರಿ ಕ್ಷೇತ್ರದ ಹಿರಿಯ ಮುಖಂಡ ಎಸ್.ಆರ್. ರಂಗಮೂರ್ತಿ, ಉದ್ಯಮಿ ಜಿ.ಎಲ್. ಆಚಾರ್ಯ ಸೇರಿದಂತೆ ಹಲವು ಗಣ್ಯರು ಅಲಂಕರಿಸಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಮಹತ್ವದ ಪ್ರಭಾವ ಹೊಂದಿರುವ ಈ ಹುದ್ದೆಯನ್ನು ಅತ್ಯಂತ ಪ್ರತಿಷ್ಠಿತ ಸ್ಥಾನವೆಂದು ಪರಿಗಣಿಸಲಾಗಿದೆ.
ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಆಯ್ಕೆಯಾಗಿರುವ ಕೃಷ್ಣ ಶೆಟ್ಟಿ ಕಡಬ ಅವರನ್ನು ಕಡಬದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಜು.19ರಂದು ಸ್ವಾಗತಿಸಲಾಯಿತು.
ಕೃಷ್ಣ ಶೆಟ್ಟಿ ಅವರು ಮಾತನಾಡಿ, ಹಲವಾರು ಮಂದಿ ಹಿರಿಯರ ಶ್ರಮದ ಫಲವಾಗಿ ಬೆಳೆದು ನಿಂತಿರುವ ಪ್ರತಿಷ್ಠಿತ ಸಂಸ್ಥೆಯ ಜವಾಬ್ದಾರಿಯನ್ನು ಎಲ್ಲರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ನಿರ್ವಹಿಸುವುದರೊಂದಿಗೆ ಹಿರಿಯರ ನಿರೀಕ್ಷೆಗೆ ಕುಂದು ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿ ಗೌರವಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪ್ರಮುಖರಾದ ಶ್ರೀಕೃಷ್ಣ ಎಂ.ಆರ್., ಪ್ರಕಾಶ್ ಎನ್.ಕೆ., ರಾಧಾಕೃಷ್ಣ ಗೌಡ ಕೋಲ್ಪೆ, ಶಿವರಾಮ ಶೆಟ್ಟಿ ಕೇಪು, ಸವಿತಾ ಶಿವಸುಬ್ರಹ್ಮಣ್ಯ ಭಟ್, ವಿಶ್ವನಾಥ ರೈ ಪೆರ್ಲ, ಅಶೋಕ್‌ಕುಮಾರ್ ಪಿ., ಸುರೇಶ್ ಗೌಡ ಕಲ್ಲೆಂಬಿ, ಮಾಧವ ಕೋಲ್ಪೆ, ಸೀತಾರಾಮ ಗೌಡ ಎ., ವಿಶ್ವನಾಥ ರೈ ಪೆರಿಯಡ್ಕ, ಮೋಹನ ಗೌಡ ಕೆರೆಕ್ಕೋಡಿ, ಅಜಿತ್ ರೈ ಆರ್ತಿಲ, ಪ್ರಮೀಳಾ ಲೋಕೇಶ್, ವಸಂತ ಕರ್ಂಬೋಡಿ, ಶೈಲಶ್ರೀ ರೈ, ಶ್ರೀಕರ ರೈ, ಮೋನಪ್ಪ ಗೌಡ, ಸುಕೇಶ್, ಪ್ರಮೋದ್ ರೈ ನಂದುಗುರಿ, ರಾಜ್‌ಕುಮಾರ ಶೆಟ್ಟಿ ನಂದುಗುರಿ, ರವೀಂದ್ರ ಶೆಟ್ಟಿ ಕೇಪು ಮುಂತಾದವರು ಹಾಜರಿದ್ದರು.
























