ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ದೃಶ್ಯ ವೈಭವಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ರಾಮಾಯಣ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಅವರ ಲುಕ್ ಮತ್ತು ನಟನೆಯನ್ನು ಕಂಡು ಪಾಕ್ ಮಂದಿ ಬೆರಗಾಗಿದ್ದಾರೆ.
ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ ಅವರು ‘ರಾಮಾಯಣ’ ಟ್ರೇಲರ್ ವೀಕ್ಷಿಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಯಾಕ್ಷನ್ ವಿಡಿಯೋ ಹಂಚಿಕೊಂಡಿದ್ದಾರೆ. ‘ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, ರಾಮಾಯಣ ಟ್ರೇಲರ್ ಅದ್ಭುತವಾಗಿದೆ. ಭಾರತ ಮತ್ತು ಬಾಲಿವುಡ್‌ಗೆ ಇಷ್ಟೊಂದು ಹಣ ಎಲ್ಲಿಂದ ಸಿಗುತ್ತದೆ? 1,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಹಾಲಿವುಡ್ ಮಟ್ಟದ VFX ತಂತ್ರಜ್ಞಾನ ಬಳಸಲಾಗಿದೆ. ಇದು ಭಾರತೀಯ ಸಿನಿಮಾ ಹಾಗೂ ಹಿಂದೂ ಧರ್ಮದ ಇತಿಹಾಸ. ಆದರೆ ಒಬ್ಬ ಪಾಕಿಸ್ತಾನಿಯಾಗಿ ನನಗೂ ಈ ಟ್ರೇಲರ್ ನೋಡಿ ರೋಮಾಂಚನವಾಗಿದೆ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಈ ಚಿತ್ರದ ಒಟ್ಟು ಬಜೆಟ್ 1,000 ಕೋಟಿ ಅಲ್ಲ, ಬದಲಿಗೆ ಬರೋಬ್ಬರಿ 4,000 ಕೋಟಿ ರೂಪಾಯಿ ಎಂದು ಭಾರತೀಯ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯಕಾವ್ಯದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಟ್ರೇಲರ್‌ನಲ್ಲಿ ಕೈಕೇಯಿ ನೀಡಿದ ಮಾತಿನಂತೆ ಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳುವುದು, ಸೀತೆ ಹಾಗೂ ಲಕ್ಷ್ಮಣ ಜೊತೆಯಾಗುವುದು ಮತ್ತು ರಾಮ-ರಾವಣರ ನಡುವಿನ ಯುದ್ಧದ ಸನ್ನಿವೇಶಗಳನ್ನು ಭವ್ಯವಾಗಿ ತೋರಿಸಲಾಗಿದೆ. ಆದರೆ, ಇಡೀ ಟ್ರೇಲರ್‌ನಲ್ಲಿ ಹನುಮಂತನ ಪಾತ್ರದ ಯಾವುದೇ ಸುಳಿವು ನೀಡದಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
























