ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ, ಮಂಗಳೂರು ವ್ಯಾಪ್ತಿಯ ರೈಲು ನಿಲ್ದಾಣಗಳು ದಕ್ಷಿಣ ರೈಲ್ವೆಯ ಕೇರಳದ ಪಾಲ್ಘಾಟ್ ವಿಭಾಗದಿಂದ ವರ್ಗಾವಣೆಗೊಂಡು, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ. ಈ ಬದಲಾವಣೆಯು ಅಕ್ಟೋಬರ್ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಹಿಂದೆ ಮಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳು ದಕ್ಷಿಣ ರೈಲ್ವೆಗೆ ಒಳಪಟ್ಟಿತು, ಈ ಆಡಳಿತಾತ್ಮಕ ತೊಡಕಿನ ಕಾರಣಕ್ಕೆ ಮಂಗಳೂರು ರೈಲ್ವೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿತ್ತು
ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮಹತ್ವದ ಸಾಧನೆಗಾಗಿ ರೈಲು ಹೋರಾಟಗಾರರು ಹಾಗೂ ಮಂಗಳೂರು ಜನತೆಯ ಪರವಾಗಿ ಸಂಸದರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಉಳ್ಳಾಲವರೆಗಿನ ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ. ನೈಋತ್ಯ ರೈಲ್ವೆ ವಲಯ ಮತ್ತು ದಕ್ಷಿಣ ರೈಲ್ವೆ ವಲಯದ ನಡುವಿನ ಇಂಟರ್ಚೇಂಜ್ ಪಾಯಿಂಟ್ಗಳು ಪಡೀಲ್ನಿಂದ ಉಳ್ಳಾಲಕ್ಕೆ ಬದಲಾಗುತ್ತವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ತೋಕೂರು ನಿಲ್ದಾಣವು ಕೊಂಕಣ ರೈಲ್ವೆ (KRCL) ನ ಭಾಗವಾಗಿಯೇ ಉಳಿಯುತ್ತದೆ. ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ವಿನಿಮಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕೊಂಕಣ ರೈಲ್ವೆ ಮತ್ತು ದಕ್ಷಿಣ ವಲಯದ ನಡುವಿನ ವಿಭಾಗೀಯ/ವಲಯ ಗಡಿಗಳು ಕೊಂಕಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ನಡುವಿನ ವಿಭಾಗೀಯ/ವಲಯ ಗಡಿಗಳಾಗುತ್ತವೆ. ಶೀಘ್ರದಲ್ಲೇ ಔಪಚಾರಿಕ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ.
- ತ್ವರಿತ ನಿರ್ಧಾರಗಳು: ಸಣ್ಣಪುಟ್ಟ ಸಮಸ್ಯೆಗಳಿಗೂ ಕೇರಳದ ಪಾಲಕ್ಕಾಡ್ ವಿಭಾಗವನ್ನು ಅವಲಂಬಿಸುವುದು ತಪ್ಪಲಿದೆ.
- ಆಡಳಿತಾತ್ಮಕ ಸುಧಾರಣೆ: ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿ ಹಾಗೂ ಪ್ರಯಾಣಿಕರ ಬೇಡಿಕೆಗಳಿಗೆ ವೇಗ ಸಿಗಲಿದೆ.
- ಆದಾಯ ಬಳಕೆ: ಮಂಗಳೂರು ಭಾಗದಿಂದ ಸಂಗ್ರಹವಾಗುವ ರೈಲ್ವೆ ಆದಾಯವು ಸ್ಥಳೀಯ ವಲಯದ ಅಭಿವೃದ್ಧಿಗೆ ಹೆಚ್ಚು ಬಳಕೆಯಾಗಲು ಅನುಕೂಲವಾಗಲಿದೆ
























