ಪುತ್ತೂರು: ದರ್ಬೆ ಜಂಕ್ಷನ್‌ನ ಜನಸೇವಾ ಕೇಂದ್ರದಲ್ಲಿ ದಾಖಲಾತಿ ಲ್ಯಾಮಿನೇಷನ್ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಆರೋಪಿಯೊಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಸೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ನೀಡಿದ ದೂರಿನಂತೆ ಮೊದಲ ಪ್ರಕರಣ ದಾಖಲಾಗಿದೆ. ಆ.21ರಂದು ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ಅವರು, ದರ್ಬೆಯ ಜನಸೇವಾ ಕೇಂದ್ರದಲ್ಲಿ ಕೆಲ ದಾಖಲಾತಿಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ನೀಡಿದ್ದರು. ಬಳಿಕ ದಾಖಲಾತಿಗಳನ್ನು ವಾಪಸ್ ಪಡೆಯುವ ವೇಳೆ ಒಂದು ದಾಖಲಾತಿ ಹಾನಿಗೊಳಗಾಗಿರುವುದನ್ನು ಗಮನಿಸಿ, ಅದನ್ನು ಸರಿಪಡಿಸಿಕೊಡುವಂತೆ ಅಥವಾ ಹೊಸ ದಾಖಲಾತಿ ಪಡೆಯಲು 300 ನೀಡುವಂತೆ ಕೇಳಿದ್ದರು ಎನ್ನಲಾಗಿದೆ. ಈ ವೇಳೆ ಕೇಂದ್ರದಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವಾಚ್ಯವಾಗಿ ಬೈದಿದ್ದು, ಸುದರ್ಶನ ಪೈ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸ್ಥಳದಲ್ಲಿ ಸೇರಿದವರು ಗಲಾಟೆ ಬಿಡಿಸಿ, ಗಾಯಗೊಂಡವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಅ.ಕ್ರ.97/2026ರಂತೆ BNSನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ (50) ನೀಡಿದ ದೂರಿನಂತೆ ಅ.ಕ್ರ.98/2026ರಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಲ್ಯಾಮಿನೇಷನ್‌ಗೆ ನೀಡಿದ್ದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹಾನಿಗೊಳಗಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಗಲಾಟೆ ಮಾಡುತ್ತಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ತಾವು ಅಂಗಡಿಗೆ ತೆರಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಗಲಾಟೆ ನಡೆಸುತ್ತಿದ್ದು, ದಾಖಲಾತಿಗಳನ್ನು ನೀಡಬೇಕು ಅಥವಾ 10,000 ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಧಾನಪಡಿಸಲು ಯತ್ನಿಸಿದ ವೇಳೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಲಾಗಿದೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂರನೇ ಪ್ರಕರಣ ದಾಖಲಾಗಿದೆ. ಜನರನ್ನು ಚದುರಿಸುವ ವೇಳೆ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಕೆಲವರನ್ನು ಠಾಣೆಗೆ ಕರೆದೊಯ್ಯುತ್ತಿದ್ದಾಗ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಅ.ಕ್ರ.99/2026ರಂತೆ BNSನ ಕಲಂ 132, 121(1) ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ (ಅ.ಕ್ರ: 97/2026) ಸಂಬಂಧಿಸಿದಂತೆ ಬಂಧಿತನಾಗಿರುವ ಪುತ್ತೂರು ಕಸಬಾ ನಿವಾಸಿ ಸುದರ್ಶನ ಪೈ (29) ಒಬ್ಬ ಹಳೆ ಆರೋಪಿಯಾಗಿದ್ದು, ಈತನ ಮೇಲೆ ಈ ಹಿಂದೆಯೇ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯ ಕ್ರಿಮಿನಲ್ ಹಿನ್ನೆಲೆ: ಪೊಲೀಸ್ ದಾಖಲೆಗಳ ಪ್ರಕಾರ, ಸುದರ್ಶನ ಪೈ ವಿರುದ್ಧ ಈ ಹಿಂದೆ ಎರಡು ಪ್ರಮುಖ ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಪ್ರಕರಣ: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ 2025ರಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಕೊಲೆ ಯತ್ನ ಪ್ರಕರಣ: ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಕೊಲೆ ಯತ್ನ (IPC 307) ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.
























