ಪುತ್ತೂರು: ಆ.21ರಂದು ದರ್ಬೆಯಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ನೈತಿಕ ಪೊಲೀಸ್ಗಿರಿ ಮಾಡಿದ ಮತಾಂದ ವ್ಯಕ್ತಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಪರಿವಾರ ಸಂಘಟನೆಗಳನ್ನು ಸೇರಿಸಿಕೊಂಡು ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಯಾನಂದ ಅಂಬುಲ ಅವರು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ದರ್ಬೆಯ ಅಂಗಡಿಯೊಂದರಲ್ಲಿ ದಾಖಲೆಗಳಿಗೆ ಲ್ಯಾಮಿನೇಷನ್ ಹಾಕುವ ವಿಚಾರಕ್ಕೆ ಸಂಬಂಧಿಸಿ ಸಣ್ಣ ಮಾತಿನ ಚಕಮಕಿ ನಡೆದ ಸಂದರ್ಭ ಅಂಗಡಿಯ ಮಾಲಕಿ ಅಂಜನಾ ಪೈ ಅವರ ಮಗಳ ಮೇಲೆ ಮತಾಂದ ವ್ಯಕ್ತಿ ಅತ್ಯಂತ ಕೆಟ್ಟ ಪದ ಬಳಕೆ ಮಾಡಿದಾಗ ಒಬ್ಬಾಕೆ ತಾಯಿಯಾಗಿ ತನ್ನ ಮಗಳ ಮೇಲೆ ಕೆಟ್ಟ ಪದ ಬಳಕೆ ಮಾಡುವುದನ್ನು ವಿರೋಧಿಸುತ್ತಾರೆ ಹಾಗು ಹಿರಿಯ ನಾಗರಿಕರಾದ ಅಂಜನಾ ಪೈ ಮತ್ತು ಅವರ ಗಂಡ ಸದಾಶಿವ ಪೈ ಅವರ ಮೇಲೆ ಹಲ್ಲೆ ನಡೆಸುತ್ತಾರೆ.
ಈ ಘಟನೆ ನಡೆದ ಕೆಲವೇ ನಿಮಿಷದಲ್ಲಿ ಕಬಕ, ಕುಂಬ್ರ, ಸಂಪ್ಯ, ಪುರುಷರಕಟ್ಟೆ ಅನೇಕ ಕಡೆಯಿಂದ ಒಂದು ಸಮುದಾಯದ ಹುಡುಗರು ಬಂದು ಜವಾಮಾಯಿಸಿರುವುದನ್ನು ಗಮನಿಸಿದಾಗ ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ವೇಳೆ ಸಮಯಕ್ಕೆ ಸರಿಯಾಗಿ ಪೊಲೀಸರು ಬಾರದೆ ಹೋಗುತ್ತಿದ್ದರೆ ಒಂದು ರೀತಿಯ ದುರ್ಘಟನೆ ನಡೆದು ಹೋಗುತ್ತಿತ್ತು.
ಈ ನಿಟ್ಟಿನಲ್ಲಿ ಇವತ್ತು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೂ ಹಿಂದು ಸಮಾಜದ ಮೇಲೆ ಪ್ರತಿ ಬಾರಿ ದಾಳಿ ಆದಾಗ ಪೊಲೀಸ್ ಇಲಾಖೆಯಿಂದ ಮಲತಾಯಿ ಧೋರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ದರ್ಬೆಯಲ್ಲಿ ನಡೆದ ದುರ್ಘಟನೆಯಲ್ಲಿ ಕಾನೂನು ಕೈಗೆತ್ತಿಕೊಂಡ ಮತಾಂದ ವ್ಯಕ್ತಿಗಳನ್ನು ಬಂಧಿಸಿಲ್ಲ. ಅವರ ಮೇಲೆ ಸಣ್ಣಪುಟ್ಟ ಕೇಸು ಹಾಕಿ ಬಿಟ್ಟಿದ್ದಾರೆ. ಅದೇ ಹಿಂದು ಸಂಘಟನೆ ಈ ಕೃತ್ಯ ಮಾಡುತ್ತಿದ್ದರೆ ತಕ್ಷಣ ನೈತಿಕ ಪೊಲೀಸ್ಗಿರಿ ಎಂದು ಪಟ್ಟಕಟ್ಟಿ ಬಂಧನ ಮಾಡುವ ಕೆಲಸ ಆಗುತ್ತಿತ್ತು.
ದರ್ಬೆಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದ ಮತಾಂದ ವ್ಯಕ್ತಿಗಳ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಅದನ್ನು ಪರಿಶೀಲಿಸಿ ಸಾಕ್ಷಿಯಾಗಿಸಿ ಅವರನ್ನು ತಕ್ಷಣ ಬಂಧಿಸಬೇಕು. ಮುಂದಿನ 48 ಗಂಟೆಯೊಳಗೆ ಅವರನ್ನು ಬಂಧಿಸದಿದ್ದಲ್ಲಿ ಹಿಂದು ಜಾಗರಣ ವೇದಿಕೆ ಇತರ ಪರಿವಾರ ಸಂಘಟನೆಗಳನ್ನು ಸೇರಿಸಿಕೊಂಡು ಜಿಲ್ಲೆಯಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.






















