ಪುತ್ತೂರು: ದರ್ಬೆ ಅಂಗಡಿಯೊಂದರಲ್ಲಿ ಲ್ಯಾಮಿನೇಷನ್ ವೇಳೆ ಜನನ ಪ್ರಮಾಣ ಪತ್ರ ಮೆಲ್ಟ್ ಅಗಿರುವ ವಿಚಾರದಲ್ಲಿ ಗ್ರಾಹಕರು ಹಾಗೂ ಸಂಸ್ಥೆಯ ಮ್ಹಾಲಕಿ ಮಧ್ಯೆ ನಡೆದ ಪರಸ್ಪರ ಹಲ್ಲೆಯಿಂದ ಗಾಯಗೊಂಡು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಸ್ಥೆಯ ಮ್ಹಾಲಕಿ ಅಂಜನಾ ಪೈ ಅವರನ್ನು ಆ.22ರಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ, ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಿಶೋರ್ ಬೊಟ್ಯಾಡಿಯವರು ಇದೊಂದು ಪೂರ್ವ ಯೋಜಿತ ಕೃತ್ಯ. ಘಟನೆಯಲ್ಲಿ ಹಲ್ಲೆಗೊಳಗಾದವರ ಮೇಲೆ ಪೊಲೀಸರು ಕೊಲೆಯತ್ನ ಕೇಸು ಹಾಕಿ ಬಂಧಿಸಿದ್ದಾರೆ. ಆದರೆ ನೂರಾರು ಜನ ಸೇರಿಸಿಕೊಂಡು ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದರುವುದಲ್ಲದೆ ಪೊಲೀಸರ ಜೀಪನ್ನು ಅಲ್ಲಾಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರ ಮೇಲೆ ಕೊಲೆಯತ್ನ ಕೇಸು ದಾಖಲಿಸಿಲ್ಲ. ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ, ಹಲ್ಲೆ ನಡೆಸಿದರವ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಅವರು ಆಗ್ರಹಿಸಿದರು.
ಆಸ್ಪತ್ರೆ ಭೇಟಿ ನೀಡಿದ ಬಳಿಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ಡಿವೈಎಸ್ಪಿ ಕಚೇರಿ ಭೇಟಿ ನೀಡಿ ಘಟನೆಯ ಬಗ್ಗೆ ವಿವರಿಸಿ, ಹಲ್ಲೆಗೊಳಗಾದವರ ಮೇಲೆ ಕೊಲೆಯತ್ನ ಕಠಿಣ ಕಾಯಿದೆಯಲ್ಲಿ ಕೇಸು ಹಾಕಲಾಗಿದೆ. ಆದರೆ ಅಂಗಡಿಗೆ ನುಗ್ಗಿ, ಗಲಾಟೆ ನಡೆಸಿ, ಹಲ್ಲೆ ನಡೆಸಿದವರ ಮೇಲೆ ಲಘು ಕೇಸು ದಾಖಲಿಸಿರುವುದು ಯಾವ ನ್ಯಾಯ ಎಂದು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರಲ್ಲಿ ಪ್ರಶ್ನಿಸಿದ ಅವರು ನೂರಾರು ಮಂದಿಯನ್ನು ಸೇರಿಸಿರುವುದು ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ವಿವರಿಸಿದರು. ನಾವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಆದರಿಸಿ ಕೇಸು ದಾಖಲಿಸಲಾಗಿದೆ ಎಂದು ಡಿವೈಎಸ್ಪಿ ಪ್ರಮೋದ್ ಕುಮಾರ್ ತಿಳಿಸಿದರು. ಅಂಗಡಿ ಮ್ಹಾಲಕರಿಗೆ ಸಿಸಿ ಕ್ಯಾಮರಾ ನೋಡಿ ಕೊಲೆಯತ್ನ ಕೇಸು ಹಾಕಿದ್ದೀರಿ. ಹಲ್ಲೆ ನಡೆಸಿದವರಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು ಯಾವ ನ್ಯಾಯ. ಅಷ್ಟೊಂದು ವಿಳಂಬ ಯಾಕೆ? ಎಂದು ಪ್ರಶ್ನಿಸಿದ ಕಿಶೋರ್ ಹಾಗೂ ಸಂಜೀವ ಮಠಂದೂರು ಅವರು ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರ ಮೇಲೂ ಕೊಲೆಯತ್ನ ಕೇಸು ದಾಖಲಿಸುವಂತೆ ಆಗ್ರಹಿಸಿದಾಗ ಶೇ.100 ದಾಖಲಿಸುವುದಾಗಿ ಡಿವೈಎಸ್ಪಿಯವರು ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಮಣಿಕಂಠ, ಉಪಾಧಕ್ಷ ಸಂತೋಷ್ ರೈ, ವಿಶ್ವನಾಥ ಕುಲಾಲ್, ಸಂತೋಷ್ ರೈ ಕೈಕಾರ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.






















