ಪುತ್ತೂರು: ಯುವಕನೋರ್ವ ಮನೆಯಂಗಳದಲ್ಲಿ ಶವವಾಗಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೆ. 18ರಂದು ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ. ಮೃತರನ್ನು ಬಡಾವು ನಿವಾಸಿ ಹಾಗೂ ಮೆಡಿಕಲ್ವೊಂದರಲ್ಲಿ ಉದ್ಯೋಗಿಯಾಗಿದ್ದ ರಕ್ಷಿತ್ (29) ಎಂದು ಗುರುತಿಸಲಾಗಿದೆ.
ರಕ್ಷಿತ್ ಅವರು ಮನೆಯಲ್ಲಿ ವಾಹನ ತೊಳೆಯುತ್ತಿದ್ದ ಸಂದರ್ಭ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮನೆಯವರು ಹೊರಗಡೆ ತೆರಳಿದ್ದ ಕಾರಣ ಘಟನೆ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.ರಕ್ಷಿತ್ ಮನೆಯಂಗಳದಲ್ಲಿ ಬಿದ್ದಿರುವುದನ್ನು ಗಮನಿಸಿದ ನೆರೆಯವರು ಕೂಡಲೇ ಇತರರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
























