ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುತ್ತಿರುವ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರಿಗೆ ಉಳಿಗಾಲ ಇಲ್ಲ ಎಂದು ಮಾಜಿ ಆಂಥ್ರೋಪಿಕ್ ವಿಜ್ಞಾನಿ ಜೇಕಬ್ ಕಾಕ್ಸನ್ ಅವರ ಅನಿಸಿಕೆಯನ್ನು ಕಂಪನಿ ಸಿಇಒ ಡೆರಿಯೋ ಅಮೋಡೈ ಕೂಡ ಪುನರುಚ್ಚರಿಸಿದ್ದಾರೆ. ಇವರ ಅಭಿಪ್ರಾಯಕ್ಕೆ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್, ಸ್ಪೇಸ್ ಎಕ್ಸ್ ಸಿಇಒ ಇಲಾನ್ ಮಸ್ಕ್ ಕೂಡ ಧ್ವನಿಗೂಡಿಸಿದ್ದಾರೆ.
ಎಐ ತಂತ್ರಜ್ಞಾನದ ತೀವ್ರಗತಿಯ ಅಭಿವೃದ್ಧಿಯ ವೇಗವನ್ನು ಕೊಂಚ ತಗ್ಗಿಸಬೇಕು ಎಂದು ಡೆರಿಯೊ ಅಮೋಡೈ ಅವರು ನೀಡಿದ ಈ ಕರೆಯನ್ನು ಓಪನ್ಎಐ (OpenAI) ಸಿಇಒ ಸ್ಯಾಮ್ ಆಲ್ಟ್ಮನ್ ಹಾಗೂ ‘ಎಕ್ಸ್’ ಸಂಸ್ಥಾಪಕ ಇಲಾನ್ ಮಸ್ಕ್ ಬೆಂಬಲಿಸಿದ್ದಾರೆ.
ಎಐ ಮಾದರಿಗಳ ಕ್ಷಿಪ್ರ ಬೆಳವಣಿಗೆಯಿಂದಾಗಿ ಮಾನವ ನಿಯಂತ್ರಣ ತಪ್ಪುವ ಮತ್ತು ಸೈಬರ್ ದಾಳಿಗಳಂತಹ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಎಐ ಅಭಿವೃದ್ಧಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಅಮೋಡೈ ಪ್ರತಿಪಾದಿಸಿದ್ದಾರೆ.
ಎಐಗೆ ನಿಯಂತ್ರಣ ಹಾಕಲು ಅಮೋಡೈ ತಿಳಿಸಿದ ಮೂರು ಹಂತದ ಯೋಜನೆಗಳು ಈ ಕೆಳಕಂಡಂತಿವೆ:
- ಎಐ ಸಂಸ್ಥೆಗಳಲ್ಲಿ ಸ್ವತಂತ್ರ ಬಾಹ್ಯ ಮೌಲ್ಯಮಾಪಕರಿಗೆ (Independent evaluators) ಉದ್ಯೋಗಿಗಳಂತೆಯೇ ಪ್ರವೇಶಾವಕಾಶ ನೀಡುವುದು.
- ಪ್ರಜಾಪ್ರಭುತ್ವ ರಾಷ್ಟ್ರಗಳ ಎಐ ಕಂಪನಿಗಳ ನಡುವೆ ಸುರಕ್ಷತಾ ನಿಯಮಗಳ ಸಮನ್ವಯತೆ ಸಾಧಿಸುವುದು.
- ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ಎಐ ಬಳಕೆಯನ್ನು ತಡೆಯಲು ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳುವುದು.
ಸ್ಯಾಮ್ ಆಲ್ಟ್ಮನ್ ಬೆಂಬಲ: ಆಂಥ್ರೋಪಿಕ್ ಸಿಇಒ ನಿರ್ಧಾರವನ್ನು ಒಪ್ಪಿಕೊಂಡಿರುವ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್, “ನಾವು ಎಐ ಅಭಿವೃದ್ಧಿಯ ವೇಗವನ್ನು ನಿಯಂತ್ರಿಸಬೇಕಿದೆ. ನಮ್ಮ ಸಂಸ್ಥೆಯಲ್ಲೂ ಸ್ವತಂತ್ರ ಬಾಹ್ಯ ಪರಿಶೀಲಕರನ್ನು (Third-party evaluators) ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇಲಾನ್ ಮಸ್ಕ್ ಸಹಮತ: ಡೆರಿಯೊ ಅವರ ಈ ಕರೆಯನ್ನು ಎಕ್ಸ್ (X)ನಲ್ಲಿ ಬೆಂಬಲಿಸಿರುವ ಇಲಾನ್ ಮಸ್ಕ್, “ಡೆರಿಯೊ ಹೇಳುತ್ತಿರುವುದು ಸರಿಯಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಎಐ ತಂತ್ರಜ್ಞಾನವನ್ನು ಲಘುವಾಗಿ ಭಾವಿಸಬೇಡಿ ಎಂದು ಓಪನ್ ಎಐ ಮತ್ತು ಆಂಥ್ರೋಪಿಕ್ನ ಮಾಜಿ ವಿಜ್ಞಾನಿ ಜೇಕಬ್ ಕಾಕ್ಸನ್ ಎಚ್ಚರಿಸಿದ್ದಾರೆ. ‘ಕೃತಕ ಬುದ್ಧಿಮತ್ತೆ ಬಹಳ ಬೇಗ ಅತಿಮಾನುಷ ಸಿಸ್ಟಂಗಳಾಗುತ್ತವೆ. ಯಾವುದನ್ನು ಬೇಕಾದರೂ ಹ್ಯಾಕ್ ಮಾಡಬಲ್ಲುವು, ಯಾವುದೇ ಕ್ಷೇತ್ರದಲ್ಲೂ ಕ್ಷಣ ಮಾತ್ರದಲ್ಲಿ ಕ್ರಾಂತಿ ತರಬಲ್ಲುದು; ನೈಜ ಶಕ್ತಿ ಮತ್ತು ಸಂಪನ್ಮೂಲಗಳನ್ನು ಗಳಿಸಬಲ್ಲುವು, ನಾವೆಲ್ಲಾ ಇದನ್ನು ಕಂಡಿದ್ದೇವೆ’ ಎಂದು ಜೇಕಬ್ ಕಾಕ್ಸನ್ ತಿಳಿಸಿದ್ದಾರೆ.
ಎಐ ಬೆಳವಣಿಗೆ ಇದೇ ವೇಗದಲ್ಲಿ ಸಾಗಿದರೆ ಮನುಷ್ಯರೇ ನಿರ್ನಾಮವಾಗಿಬಿಡುತ್ತಾರೆ ಎಂದು ಎಚ್ಚರಿಸಿರುವ ಅವರು, ಓಪನ್ ಎಐಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಈಗ ಎಐ ಟೆಕ್ ಕ್ಷೇತ್ರದ ನೇತಾರರು ತಮ್ಮ ತಪ್ಪಿನ ನಡೆಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಮುಂದಾಗಿರುವುದು ಕುತೂಹಲದ ಸಂಗತಿ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಐ ವಲಯದಲ್ಲಿ ಭದ್ರತೆ ಮತ್ತು ಸುರಕ್ಷತಾ ತಪಾಸಣೆಗಳನ್ನು ಬಲಪಡಿಸಲು ಪ್ರಮುಖ ಎಐ ಸಂಸ್ಥೆಗಳು ಜಂಟಿಯಾಗಿ ಹೆಜ್ಜೆ ಇಡುತ್ತಿರುವುದು ತಂತ್ರಜ್ಞಾನ ವಲಯದಲ್ಲಿ ಗಮನ ಸೆಳೆದಿದೆ.
























