ಬೆಂಗಳೂರು: ಅಕ್ಟೋಬರ್ 02: ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಹೊಂಚು ಹಾಕಿದ್ದ ಬೃಹತ್ ಅಂತರರಾಜ್ಯ ಜಾಲವೊಂದನ್ನು ಭೇದಿಸುವಲ್ಲಿ ಚಾಮರಾಜಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಹಾಗೂ ಪ್ರಿಂಟಿಂಗ್ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ
ಮೈಸೂರು ರಸ್ತೆಯ ಫ್ಲೈಓವರ್ ಬಳಿಯಿರುವ ಪೆಟ್ರೋಲ್ ಬಂಕ್ ಬಳಿ ಕಾರಿನಲ್ಲಿ ಖೋಟಾ ನೋಟುಗಳನ್ನು ಇಟ್ಟುಕೊಂಡು ಚಲಾವಣೆಗೆ ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ಕಾರನ್ನು ಪರಿಶೀಲಿಸಿದಾಗ 500 ರೂಪಾಯಿ ಮುಖಬೆಲೆಯ 4,337 ನಕಲಿ ನೋಟುಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಮೌಲ್ಯ 21,68,500 ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಖೋಟಾ ನೋಟು ಜಾಲದ ಹಿಂದೆ ದೊಡ್ಡ ಅಂತರರಾಜ್ಯ ನೆಟ್ವರ್ಕ್ ಇರುವುದು ಬೆಳಕಿಗೆ ಬಂದಿದೆ. ತಮಿಳುನಾಡಿನ ಕೃಷ್ಣಗಿರಿ ಹಾಗೂ ತೆಲಂಗಾಣ ಭಾಗಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ನಕಲಿ ನೋಟು ಮುದ್ರಿಸುತ್ತಿದ್ದ ಜಾಗದ ಮಾಹಿತಿ ಲಭಿಸಿತ್ತು. ತಮಿಳುನಾಡಿನ ಪ್ರಿಂಟಿಂಗ್ ಅಡ್ಡ ಮೇಲಿನ ದಾಳಿ ವೇಳೆ 17 ಪ್ರಿಂಟಿಂಗ್ ಮಷಿನ್ಗಳು, ಕಾಗದಗಳು, ನೋಟಿನ ಸ್ಟ್ರಿಪ್ಸ್ ಹಾಗೂ ಪ್ರಿಂಟಿಂಗ್ ಜಾಗದಲ್ಲಿದ್ದ ಹೆಚ್ಚುವರಿ 6 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದಲ್ಲಿ ಸತ್ಯಂ, ಮುರುಗೇಶ್, ಗೋವಿಂದನ್, ಬರ್ಕತ್, ಸರವಣನ್, ಲಕ್ಷ್ಮಣ ಹಾಗೂ ಕೃಷ್ಣ ಎಂಬ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಒಂದು ಕಾರು ಹಾಗೂ 8 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರು ಮಾಹಿತಿ ನೀಡಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
























