ಪುತ್ತೂರು: ಚೆನ್ನೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದ ಡಾ. ಶ್ರೀಕೃಷ್ಣ ಭಟ್ ಆರ್ತಿಕಜೆ (81) ಅವರು ಅಲ್ಪಕಾಲದ ಅನಾರೋಗ್ಯದ ನಂತರ ಇಂದು ಚೆನ್ನೈನಲ್ಲಿ ನಿಧನರಾದರು.
ಪುತ್ತೂರು ತಾಲೂಕಿನ ಈಶ್ವರಮಂಗಲ ಹತ್ತಿರದ ಅರ್ತಿಕಜೆಯವರಾದ ಡಾ. ಭಟ್ ಅವರು ತಮ್ಮ ಬೋಧನಾ ವೃತ್ತಿಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಆರಂಭಿಸಿ, ನಂತರ ಚೆನ್ನೈ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸೇರಿ, ಅಲ್ಲಿ ವಿಭಾಗದ ಮುಖ್ಯಸ್ಥರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಇವರು, ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಚೆನ್ನೈನಲ್ಲಿ ವಿವಿಧ ‘ಕರ್ನಾಟಕ ಸಂಘ’ದ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಪತ್ನಿ ಹಾಗೂ ಪುತ್ರ ಶ್ಯಾಮ್ ಪ್ರಕಾಶ್ (ಚೆನ್ನೈನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ) ಅವರನ್ನು ಅಗಲಿದ್ದಾರೆ. ಇವರು ಪುತ್ತೂರಿನ ನಿವೃತ್ತ ಪ್ರಾಧ್ಯಾಪಕ ಮತ್ತು ಖ್ಯಾತ ಲೇಖಕ ಶ್ರೀ ವಿ.ಬಿ. ಆರ್ತಿಕಜೆ ಅವರ ಕಿರಿಯ ಸಹೋದರರಾಗಿದ್ದಾರೆ.
ಹಂಪೆ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ, ಪ್ರಾಧ್ಯಾಪಕ ಹಾಗೂ ಲೇಖಕ ಡಾ. ಬಿ ಎ ವಿವೇಕ ರೈ ಹಾಗೂ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಹಾಗೂ ಪ್ರಾಧ್ಯಾಪಕರಾಗಿದ್ದ ಡಾ. ಚಿನ್ನಪ್ಪ ಗೌಡ ಅವರುಗಳು ಡಾ. ಶ್ರೀಕೃಷ್ಣ ಅರ್ತಿಕಜೆಯವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
























