ಮೂಡುಬಿದಿರೆ : ಮೈಸೂರು ದಸರಾ ಸಂದರ್ಭದಲ್ಲಿ ನಡೆದ ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರು ಹಾಗೂ ಹಿರಿಯರಿಗೆ ಸೂಕ್ತ ಗೌರವ ನೀಡದಿರುವುದು ಮತ್ತು ಪೊಲೀಸರಿಂದ ಪ್ರವೇಶ ನಿರಾಕರಿಸಿದ ಬೆಳವಣಿಗೆಗಳು ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ನಡೆಯುವ ಕಂಬಳಗಳು ಅಧಿಕಾರಿಗಳ ಕಂಬಳ ಎಂಬಂತಾಗಬಾರದು ಎಂದು ಸಮಿತಿ ಸ್ಪಷ್ಟಪಡಿಸಿದೆ.
ಜಿಲ್ಲಾ ಕಂಬಳ ಸಮಿತಿ ಹಾಗೂ ಕಂಬಳ ಅಸೋಸಿಯೇಶನ್ನ ನಿಯಮಾವಳಿಯಂತೆ ಕಂಬಳಗಳು ನಡೆಯಬೇಕು. ಕಂಬಳಕ್ಕೆ ಸಂಬಂಧಪಟ್ಟವರಿಗೆ ಸೂಕ್ತ ಗೌರವ ಹಾಗೂ ಪ್ರವೇಶ ವ್ಯವಸ್ಥೆ ಕಲ್ಪಿಸದಿದ್ದರೆ, ಅಂತಹ ಕಂಬಳಗಳಿಗೆ ಸಹಕಾರ ನೀಡದಿರುವ ಬಗ್ಗೆಯೂ ಸಭೆಯಲ್ಲಿ ಚಿಂತನೆ ನಡೆಸಲಾಯಿತು.
ಇದೇ ವೇಳೆ ಕಂಬಳದ ಕೆಲವು ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕಂಬಳದ ತೀರ್ಪುಗಾರರು ಹಾಗೂ ವೀಕ್ಷಕ ವಿವರಣೆಗಾರರು ಜಿಲ್ಲಾ ಕಂಬಳ ಸಮಿತಿಯ ಆಜೀವ ಸದಸ್ಯರಾಗಿರುವುದು ಕಡ್ಡಾಯ. ಸದಸ್ಯತ್ವ ಹೊಂದಿರದವರನ್ನು ಯಾವುದೇ ಕಂಬಳ ಸಮಿತಿಗಳು ಈ ಹುದ್ದೆಗಳಿಗೆ ನಿಯೋಜಿಸಬಾರದು ಎಂದು ತೀರ್ಮಾನಿಸಲಾಯಿತು. ಕೋಣಗಳ ಯಜಮಾನರೂ ಸಮಿತಿಯ ಸದಸ್ಯತ್ವ ಪಡೆಯುವಂತೆ ಮನವಿ ಮಾಡಲಾಯಿತು.
ಸರಕಾರದ ಮಾರ್ಗಸೂಚಿಯಂತೆ 150 ಜತೆ ಕೋಣಗಳು ಭಾಗವಹಿಸುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚು ಜತೆ ಕೋಣಗಳು ಭಾಗವಹಿಸುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸಲು ಅವಕಾಶವಿದೆ.
ಕಂಬಳದ ವಿಳಂಬ ತಪ್ಪಿಸುವ ಉದ್ದೇಶದಿಂದ ಗಂತಿನಲ್ಲಿ ಕೋಣಗಳನ್ನು ಬಿಡಲು ಗರಿಷ್ಠ 15 ನಿಮಿಷಗಳ ಕಾಲಮಿತಿಯನ್ನು ನಿಗದಿಪಡಿಸಲಾಯಿತು. ಅಲ್ಲದೆ, ತೀರ್ಪುಗಾರರ ಸಂಭಾವನೆಯನ್ನೂ ಗೊತ್ತುಪಡಿಸಲಾಯಿತು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಮಾಜಿ ಅಧ್ಯಕ್ಷರಾದ ಭಾಸ್ಕರ ಎಸ್. ಕೋಟ್ಯಾನ್, ಪಿ.ಆರ್. ಶೆಟ್ಟಿ ಸೇರಿದಂತೆ ವಿಜಯಕುಮಾರ್ ಕಂಗಿನಮನೆ, ಲೋಕೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ರಶ್ಮಿತ್ ಶೆಟ್ಟಿ, ಗಿರೀಶ್ ಆಳ್ವ, ಅರುಣ್ ಶೆಟ್ಟಿ, ದೇವರಾಜ್ ಹೆಗ್ಡೆ, ಅಶ್ವತ್ಥ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು.
























