ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಸಮಗ್ರ ಅಭಿವೃದ್ದಿಗೆ ರೂ.5 ಕೋಟಿ ಹಾಗೂ ಜಿಲ್ಲೆಯ ಏಳು ಮಠಗಳಿಗೆ ತಲಾ ಒಂದು ಕೋಟಿ ರೂ.ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ.ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಅನುದಾನ ಬಿಡುಗಡೆಗೆ ಆದೇಶಿಸಿದ್ದಾರೆ.ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು.ಇದೀಗ ಅನುದಾನ ಬಿಡುಗಡೆಗೆ ಸರ್ಕಾರದ ಆದೇಶವಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ರೂ.5 ಕೋಟಿ ಬಿಡುಗಡೆಗೆ ಆದೇಶವಾಗಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎ ವರ್ಗಕ್ಕೆ ಸೇರಿದ್ದು,ವಾರ್ಷಿಕವಾಗಿ 8.88 ಕೋಟಿ ರೂ. ಆದಾಯವನ್ನು ಹೊಂದಿದೆ ದೇವಸ್ಥಾನಕ್ಕೆ 34.82 ಎಕ್ರೆ ಭೂಮಿ ಕೂಡಾ ಇದ್ದು ಇತಿಹಾಸ ಪ್ರಸಿದ್ದವಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಾಲಯದ ವತಿಯಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಅಗತ್ಯವಿದೆ.ಇದಲ್ಲದೆ ಈ ದೇವಾಲಯದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಮಾಸ್ಟರ್ ಪ್ಲಾನ್ ಕೂಡಾ ಸಿದ್ಧಪಡಿಸಿದ್ದು, ಪರಿಶೀಲನೆಯಲ್ಲಿದೆ.ದೇವಾಲಯದ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿದೆ.
ದೇವಾಲಯದ ಸಮಗ್ರ ಅಭಿವೃದ್ದಿಗಾಗಿ ಅನುದಾನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು,ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ 2026-27ನೇ ಸಾಲಿಗೆ ವಿಶೇಷ ಅನುದಾನದಿಂದ ಧಾರ್ಮಿಕ ದತ್ತಿ ಇಲಾಖೆಯ ಮೂಲಕ 5 ಕೋಟಿ ರೂ ಬಿಡುಗಡೆಗೆ ಆದೇಶಿಸಿದ್ದಾರೆ. ಈ ಕುರಿತು ಸರ್ಕಾರದ ಕಂದಾಯ ಇಲಾಖೆ(ಧಾರ್ಮಿಕ ದತ್ತಿ)ಅಧಿನ ಕಾರ್ಯದರ್ಶಿ ಮಾಲಾ ಎಸ್.ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಿಗೆ ಆದೇಶ ಮಾಡಿದ್ದಾರೆ.ಈ ಮೂಲಕ ಪುತ್ತೂರು ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಇನ್ನಷ್ಟು ಅಭಿವೃದ್ದಿ ಹೊಂದಲಿದೆ.

ಶಾಸಕ ಅಶೋಕ್ ಕುಮಾರ್ ರೈಯವರ ಕೋರಿಕೆಯಂತೆ, ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ಕು ಸೇರಿ ಜಿಲ್ಲೆಯ ಏಳು ಮಠಗಳ ಜೀರ್ಣೋದ್ಧಾರ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ರೂ.ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಒಡಿಯೂರು ಮಠ, ಶ್ರೀಧಾಮ ಮಾಣಿಲ ಮಠ, ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರ, ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಕನ್ಯಾನ, ಉಲ್ಲಾಳ ಪಿಲಿಚಾಮುಂಡಿ ದೈವಸ್ಥಾನ, ಕೊಂಡಾನ ಕೋಟೆಕಾರ್, ಶ್ರೀರಾಮ ಕ್ಷೇತ್ರ ಕನ್ಯಾಡಿ ಮತ್ತು ಕೇಮಾರು ಮಠ ಶ್ರೀ ಸಾಂದೀಪನಿ ಸಾಧನಾಶ್ರಮಕ್ಕೆ ತಲಾ ಒಂದು ಕೋಟಿ ರೂ.ಅನುದಾನ ಬಿಡುಗಡೆ ಆದೇಶವಾಗಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ.ಅಲ್ಲದೆ, 7 ಮಠಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ತಲಾ ಒಂದು ಕೋಟಿ ರೂ.ಅನುದಾನ ಬಿಡುಗಡೆ ಆದೇಶವಾಗಿದೆ.ಜೊತೆಗೆ 6 ಮಸೀದಿ ಮತ್ತು 3 ಚರ್ಚ್‌ಗಳ ಅಭಿವೃದ್ಧಿ,ಮೂಲಭೂತ ಸೌಕರ್ಯಕ್ಕಾಗಿ ತಲಾ ಒಂದು ಕೋಟಿ ರೂ.ಸೇರಿ ಒಟ್ಟು 21 ಕೋಟಿ ರೂ.ಸರ್ಕಾರದಿಂದ ಬಿಡುಗಡೆಗೆ ಆದೇಶವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ನಮ್ಮ ಆಚಾರ- ವಿಚಾರ, ಸಂಸ್ಕೃತಿ, ಸಂಸ್ಕಾರದ ಜೊತೆಗೆ ಧರ್ಮಬೋಧನೆ ಮೂಲಕ ಸ್ವಸ್ಥ ಮತ್ತು ಸಶಕ್ತ ಸಮಾಜ ಕಟ್ಟುವ ಕಾಯಕದಲ್ಲಿ ನಾಡಿನ ಮಠ ಮಂದಿರಗಳು ಕಳೆದ ಹಲವು ವರ್ಷಗಳಿಂದ ಯಾವುದೇ ನಿರೀಕ್ಷೆಯಿಲ್ಲದೆ ತೊಡಗಿಸಿಕೊಂಡಿರುವುದನ್ನು ಗಮನಿಸಿದ್ದೇನೆ.ಆದರೆ ಇಷ್ಟರವರೆಗೆ ಯಾರೊಬ್ಬರೂ ಮಠ,ಮಂದಿರಗಳಿಗೆ ನಯಾಪೈಸೆ ಅನುದಾನ ನೀಡಲಿಲ್ಲ. ಬಿಜೆಪಿಯವರು ಮಠ ಮಂದಿರಗಳ ಪರ ಇರುವುದಾಗಿ ತೋರಿಸಿಕೊಳ್ಳುವುದೇ ಹೊರತು ಅವರ ಸರ್ಕಾರ ಇರುವಾಗಲೂ ಮಠ,ಮಂದಿರಗಳಿಗೆ ಯಾವುದೇ ಅನುದಾನ ನೀಡಲಿಲ್ಲ. ಯಾವುದೇ ಸ್ವಾಮೀಜಿಗಳು ಅನುದಾನ ಕೇಳಲಿಲ್ಲ.ಆದರೂ ಅವರು ಮಾಡುವ ನಿಸ್ವಾರ್ಥ ಸೇವೆಯನ್ನು ಕಂಡು ಅನುದಾನಕ್ಕಾಗಿ ನಾನೇ ಸ್ವಇಚ್ಚೆಯಿಂದ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದಕ್ಕೆ ಸ್ಪಂದಿಸಿದ್ದು,ಇದೀಗ ಅನುದಾನ ಬಿಡುಗಡೆಗೆ ಆದೇಶವಾಗಿದೆ.ನಮ್ಮದು ನಕಲಿ ಹಿಂದುತ್ವವಲ್ಲ.ನೈಜ ಹಿಂದುತ್ವ – ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು

























