ಚಾರ್ಮಾಡಿ- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವಾಹನ ಸವಾರರ ಪಾಲಿಗೆ ಸವಾಲಾಗಿ ಪರಿಣಮಿಸುತ್ತಿದೆ. ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಹಲವು ಕಡೆಗಳಲ್ಲಿ ಇನ್ನೂ ಪೂರ್ಣಗೊಳ್ಳದೆ ಬಾಕಿ ಉಳಿದಿದ್ದು, ಇದರ ನಡುವೆ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯಿಂದ ಅಪಘಾತಗಳ ಆತಂಕ ಹೆಚ್ಚಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಾಣಸಿಗುವ ಆಳವಾದ ಕಂದಕಗಳು, ಅಪೂರ್ಣ ತಡೆಗೋಡೆಗಳು, ರಸ್ತೆ ಬದಿಯ ಮಣ್ಣಿನ ರಾಶಿ, ಸೂಚನಾ ಫಲಕಗಳ ಕೊರತೆ ಹಾಗೂ ಕಾಮಗಾರಿ ಸಾಮಗ್ರಿಗಳು ವಾಹನ ಸಂಚಾರಕ್ಕೆ ತೊಡಕಾಗುತ್ತಿವೆ.
ಚಾರ್ಮಾಡಿ- ಪುಂಜಾಲಕಟ್ಟೆ ನಡುವಿನ ಸುಮಾರು 32 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಹಾಗೂ ವಿಸ್ತರಣೆ ಕಾಮಗಾರಿ ಹಲವು ಹಂತಗಳಲ್ಲಿ ನಡೆಯುತ್ತಿದೆ. ಕಾಮಗಾರಿ ಆರಂಭವಾಗಿ 3 ವರ್ಷಗಳೇ ಕಳೆದಿದ್ದರೂ ಕೆಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿಲ್ಲ. ಒಂದು ಭಾಗದಲ್ಲಿ ಡಾಂಬರು ಹಾಕಿ ರಸ್ತೆ ಸುಗಮಗೊಳಿಸಿದ್ದರೆ, ಮತ್ತೊಂದು ಭಾಗದಲ್ಲಿ ಮಣ್ಣು, ಜಲ್ಲಿ ಹಾಗೂ ಕಂದಕಗಳು ಕಾಣಸಿಗುತ್ತವೆ. ಕೆಲವೆಡೆ ತಡೆಗೋಡೆ ಮತ್ತು ತಡೆಬೇಲಿ ನಿರ್ಮಾಣ ಬಾಕಿಯಿದೆ.
ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ ಸಂಚರಿಸುವ ವಾಹನ ಸವಾರರಿಗೆ ಇಂತಹ ಅಪಾಯಕಾರಿ ಸ್ಥಳಗಳು ಸುಲಭವಾಗಿ ಗೋಚರಿಸುವುದಿಲ್ಲ. ಮಳೆ ಸಮಯ ರಸ್ತೆ ಬದಿಯ ಮಣ್ಣು ಸಡಿಲಗೊಂಡು ಅಪಾಯ ಮತ್ತಷ್ಟು ಹೆಚ್ಚುತ್ತದೆ. ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಫಲಕಗಳು, ಪ್ರತಿಫಲಕಗಳು, ಬ್ಯಾರಿಕೇಡ್‌ಗಳು ಹಾಗೂ ರಾತ್ರಿ ಗೋಚರಿಸುವ ಎಚ್ಚರಿಕೆ ದೀಪಗಳನ್ನು ಅಳವಡಿಸದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ರಸ್ತೆ ಅಭಿವೃದ್ಧಿಯಿಂದ ಪ್ರಯಾಣದ ಅವಧಿ ಕಡಿಮೆಯಾಗಬೇಕು, ವಾಹನ ಸಂಚಾರ ಸುಗಮವಾಗಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ವಾಹನಗಳ ವೇಗ ಹೆಚ್ಚಾಗುತ್ತಿರುವುದು ಮತ್ತೊಂದು ಅಪಾಯಕ್ಕೆ ಕಾರಣವಾಗುತ್ತಿದೆ. ರಸ್ತೆ ಸುಧಾರಿಸಿದ ಭಾಗದಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಏಕಾಏಕಿ ಅಪೂರ್ಣ ಕಾಮಗಾರಿ ಇರುವ ಭಾಗವನ್ನು ತಲುಪಿದಾಗ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ.
ಚಾರ್ಮಾಡಿ- ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಅಪೂರ್ಣವಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಜತೆಗೆ ಅಪಾಯಕಾರಿ ತಿರುವುಗಳು, ಆಳವಾದ ಕಂದಕಗಳು, ಸೇತುವೆ ಸಂಪರ್ಕ ಭಾಗಗಳು ಹಾಗೂ ರಸ್ತೆ ಬದಿಯ ಇಳಿಜಾರು ಪ್ರದೇಶಗಳಲ್ಲಿ ತಕ್ಷಣ ತಡೆಗೋಡೆ ಮತ್ತು ತಡೆಬೇಲಿ ನಿರ್ಮಿಸಬೇಕು. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸೂಚನಾ ಫಲಕ, ಬ್ಯಾರಿಕೇಡ್ ಹಾಗೂ ರಾತ್ರಿ ಪ್ರತಿಫಲಕ ವ್ಯವಸ್ಥೆ ಅಳವಡಿಸಬೇಕು.
ಸಂಬಂಧಪಟ್ಟ ಹೆದ್ದಾರಿ ಇಲಾಖೆ ಮತ್ತು ಕಾಮಗಾರಿ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳು ಹೆದ್ದಾರಿಯುದ್ದಕ್ಕೂ ಪರಿಶೀಲನೆ ನಡೆಸಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
























