ವಿಟ್ಲ: ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶವಾಗಿರುವ ಹಿನ್ನೆಲೆಯಲ್ಲಿ ಗಡಿಪಾರು ಆದೇಶದ ಬಳಿಕ ನಾಪತ್ತೆಯಾಗಿರುವ ಮಾಣಿ ನರಸಿಂಹ ಅವರು ಎಲ್ಲಿಯಾದರೂ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಿಂದ ಅವರನ್ನು ಹೊರ ಜಿಲ್ಲೆಗೆ ಗಡಿಪಾರು ಮಾಡಲು ಈ ಹಿಂದೆಯೇ ಆದೇಶವಾಗಿತ್ತು.
ಗಡಿಪಾರು ಆದೇಶ ಜಾರಿ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮಾಹಿತಿ ಅರಿತ ಭಾರತೀಯ ಜನತಾ ಪಾರ್ಟಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಉಜ್ವಲ್ ಪ್ರಭು ಹಾಗೂ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ದಿನೇಶ್ ಪಂಜಿಗ, ಪುಷ್ಪರಾಜ್ ಕಮ್ಮಾಜೆ, ಅನುಪ್ ರಾಜ್ ಮಯ್ಯ, ಹಿಂದೂ ಸಂಘಟನೆ ಮುಖಂಡ ಅಜಯ್ ದೀಕ್ಷಿತ್ ಸೇರಿದಂತೆ ಹಲವಾರು ಮುಖಂಡರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.























