ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಘಟನೆ ನಡೆದಿದೆ. ಮಹೇಶ್ ಕೊಲಾಟೆ (28) ಬರ್ಬರವಾಗಿ ಕೊಲೆಯಾದವನು.
ಮಹಾರಾಷ್ಟ್ರದ ಪುಣೆಯಿಂದ ಗಾಣಗಾಪುರ ದತ್ತನ ದರ್ಶನಕ್ಕೆ ಮಹೇಶ್ ಆಗಮಿಸಿದ್ದ. ಗಾಣಗಾಪುರದ ಸಂಗಮದ ಪಕ್ಕದಲ್ಲಿರುವ ಜಮೀನಿನಲ್ಲಿ ಮಹೇಶ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಮಹೇಶ್ ಕಳೆದ ಎರಡು ತಿಂಗಳಿಂದ ಊರು ಬಿಟ್ಟು ಬಂದಿದ್ದ ಎನ್ನಲಾಗಿದೆ. ಮನೆಯವರಿಗೂ ಹೇಳದೆ ಮನೆ ಬಿಟ್ಟಿದ್ದ ಮಹೇಶ್ ದೇವಸ್ಥಾನಗಳಿಗೆ ಅಲೆದಾಡುತ್ತಿದ್ದ. ಮೊನ್ನೆ ಗಾಣಾಗಪುರಕ್ಕೆ ಬಂದಿರುವುದಾಗಿ ಹೇಳಿದ್ದ ಮಹೇಶ್ ಬಳಿಕ ಕೊಲೆಯಾಗಿ ಹೋಗಿದ್ದ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಹಂತಕರು ಯಾರು? ಯಾಕಾಗಿ ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.