ಬೆಳ್ತಂಗಡಿ : ತಾಲೂಕಿನ ನಾವೂರಿನ ವೈದ್ಯ ಡಾ. ಪ್ರದೀಪ್ ನಾವೂರು ಆಟಿಕುಕ್ಕೆ ಅವರ ಕ್ಲಿನಿಕ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಭೇಟಿ ನೀಡಿದ್ದು, ಡಾ. ಪ್ರದೀಪ್ ಅವರೊಂದಿಗೆ ಸುಮಾರು ಮೂವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಡಾ. ಪ್ರದೀಪ್ ಅವರ ಕ್ಲಿನಿಕ್ಗೆ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕ್ಲಿನಿಕ್ ನಾಶ ಮಾಡಲು ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಎನ್ನುವುದು ನಮ್ಮ ಅನಿಸಿಕೆಯೂ ಆಗಿದೆ. ನಿಮಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಚಿವ ಖಾದರ್ ಭರವಸೆ ನೀಡಿದ್ದಾರೆ.
ಆರೋಗ್ಯ ಸಮಸ್ಯೆ ಹೇಳಿಕೊಂಡು ಬರುವ ಕ್ಲಿನಿಕ್ಗೆ ಹಾನಿ ಮಾಡುವ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ವೈದ್ಯರನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ. ಅಂಥದ್ದರಲ್ಲಿ ಡಾ. ಪ್ರದೀಪ್ ನಾವೂರು ಅವರ ಕ್ಲಿನಿಕ್ಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಅಕ್ಷಮ್ಯ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂಬ ಭರವಸೆ ನನಗೆ ಇದೆ ಎಂದು ಯು.ಟಿ. ಖಾದರ್ ಅವರು ಮಾತುಕತೆ ವೇಳೆ ಡಾ. ಪ್ರದೀಪ್ರಿಗೆ ತಿಳಿಸಿದ್ದಾರೆ.
ಖಾದರ್ ಭೇಟಿ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಹಿರಿಯ ಮುಖಂಡ ರಾಜಶೇಖರ ಅಜ್ರಿ ಮುಂತಾದವರು ಕ್ಲಿನಿಕ್ನಲ್ಲಿ ಉಪಸ್ಥಿತರಿದ್ದು, ಡಾ. ಪ್ರದೀಪ್ ಅವರಿಗೆ ನೈತಿಕ ಸ್ಥೈರ್ಯ ತುಂಬಿದರು. ಡ। ಕವಿತಾ , ಕಟ್ಟಡದ ಮಾಲಕರಾದ ತನುಜಾ ಶೇಖರ್ ಹಾಗೂ ಸ್ವರೂಪ್ ಮತ್ತು ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಚಿವ ಖಾದರ್ ಭೇಟಿ ಬಗ್ಗೆ ಮಾಹಿತಿ ಹಂಚಿಕೊಂಡ ಡಾ. ಪ್ರದೀಪ್ ನಾವೂರು, “ರಾಜ್ಯದ ಆರೋಗ್ಯ ಸಚಿವರು ಕ್ಲಿನಿಕ್ಗೆ ಭೇಟಿ ನೀಡಿ ಮಾತನಾಡಿ, ನಮ್ಮಲ್ಲಿ ಭರವಸೆ ತುಂಬಿರುವುದು ಸಮಾಧಾನ ತಂದಿದೆ.
ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ದುಷ್ಕೃತ್ಯದ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಿ, ಶಿಕ್ಷಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಈ ದಿಕ್ಕಿನಲ್ಲಿ ಕಾನೂನು ಹೋರಾಟ ಮುಂದುವರಿಸಲಿದ್ದೇವೆ” ಎಂದು ಹೇಳಿದ್ದಾರೆ.
























