ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರಿಂದ ಕೊಲ್ಲಾಪುರದಲ್ಲಿ ಬಂಧಿಸಲಾಗಿದೆ. ಸದ್ಯ ಈ ಬಗ್ಗೆ ನನಗೂ ನನ್ನ ಸಹೋದರನಿಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಿನ್ನೆಯೇ ಸೋಮಶೇಖರ್ ನಾಯಕ್ ಹಾಗೂ ವಿಜಯಕುಮಾರಿ ಎಂಬುವವರನ್ನು ಬಂಧಿಸಲಾಗಿದೆ.
ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್ ಜೋಶಿ, ಮಹಾರಾಷ್ಟ್ರದ ಕೊಲ್ಲಾಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 5.30ಕ್ಕೆ ಲಾಡ್ಜ್ಗೆ ತೆರಳಿ ಬಂಧಿಸಿರುವ ಪೊಲೀಸರು ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾರೆ. ಸುನೀತಾ ಚೌಹಾಣ್ ಎಂಬುವವರು ನೀಡಿದ ದೂರಿನ ಮೇರೆಗೆ ಗೋಪಾಲ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇಂದು ವಿಚಾರಣೆ ಹಾಜರಾಗುವಂತೆ ಸೂಚನೆ ಹಿನ್ನಲೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಗೆ ಸುನೀತಾ ಚೌಹಾಣ್ ಆಗಮಿಸಿದ್ದರು. ಬಳಿಕ ಅವರನ್ನು ಸ್ಥಳ ಮಹಜರಿಗಾಗಿ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿರುವ ಗೋಪಾಲ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎಸಿಪಿ ಚಂದನ್ರೊಂದಿಗೆ ಅಶೋಕನಗರ ಪೊಲೀಸರ ತಂಡದಿಂದ ಗೋಪಾಲ್ ಜೋಶಿ ನಿವಾಸದಲ್ಲಿ ಪಂಚನಾಮೆ ಮಾಡಲಾಗಿದೆ